ಇಂಡಿಯಾ ಶೈನಿಂಗ್


source: Varthabharathi

ಹಿಂದುತ್ವ ಮತ್ತು ದಲಿತ ಮಹಿಳೆ (ಭಾಗ-1)

ಸೋಮವಾರ – ಜೂನ್ -28-2010

ಒಬ್ಬ ದಲಿತ ಮಹಿಳೆಯ ದೃಷ್ಟಿಕೋನದಿಂದ ‘‘ಹಿಂದುತ್ವ’’ ಎಂಬ ಹಣೆಪಟ್ಟಿಯ ಸಾಮಾಜಿಕ ಅವ್ಯವಸ್ಥೆಯ ಬಗ್ಗೆ ಬರೆಯುವುದೆಂದರೆ ತೀರ ಪರಿಚಿತ ವೈರಿಯ ಬಗ್ಗೆ ಬರೆದಂತೆಯೇ. ಮಾಮೂಲಿ ದಿನಗಳಲ್ಲಾದರೆ ಈ ವಿಷಯದ ಬಗ್ಗೆ ಸಮಾಜಶಾಸ್ತ್ರದ ಕ್ಲಿಷ್ಟ ಪರಿಭಾಷಾ ಪದಗಳನ್ನೆಲ್ಲಾ ಬಳಸಿ, ನೂರಾರು ಸಣ್ಣ ಅಕ್ಷರದ ಫೂಟ್‌ನೋಟುಗಳನ್ನು ಕೊರೆದು, ಅರ್ಥವಾಗದ ಪದಪುಂಜಗಳ ಪ್ರವಾಹವನ್ನೇ ಹರಿಸಿಬಿಡುತ್ತಿದ್ದೆ. ಆದರೆ ದಿನ ಪತ್ರಿಕೆಯಲ್ಲಿ ಇವತ್ತಿಗೂ ತಲೆಯ ಮೇಲೆ ಕಕ್ಕಸ್ಸನ್ನು ಹೊತ್ತು ಊರನ್ನು ಶುಚಿಗೊಳಿಸುವ ಗುಜರಾತಿನ ಕೆಲ ದಲಿತ ಮಹಿಳೆಯರ ಸಂದರ್ಶನ ಓದಿದ ನಂತರ ಆ ಶೈಲಿಯಲ್ಲಿ ಬರೆಯುವುದು ಬೇಡ ಎನ್ನಿಸುತ್ತಿದೆ.

ಈ ಸುದ್ದಿ ಓದಿದಾಗ ನನ್ನ ಮನಸ್ಸಿನಲ್ಲಿ ನೂರಾರು ಭಾವನೆಗಳು ನುಗ್ಗಿ ಬಂದವು. ಕೊನೆಗೆ ಆವರಿಸಿರುವುದು ಮೋಸ ಹೋದವರ ಉಮ್ಮಳಿಸುವ ವೌನ; ಕಿರುಚಿ ರಂಪ ಎಬ್ಬಿಸಿಬಿಡಬೇಕೆನ್ನುವ ಹಸಿಹಸಿ ತುಡಿತ. ‘‘ಇಂಡಿಯಾ ಶೈನಿಂಗ್’’ ಎಂಬ ಚಂದದ ಹೇಳಿಕೆಯ ಹಿಂದೆ ಏನೆಲ್ಲ ಕೊಳೆತು ನಾರುತ್ತಿದೆ ಎಂಬುದನ್ನು ಈ ಸುದ್ದಿಯು ಬಯಲು ಮಾಡಿ ನನ್ನ ಆಶಾವಾದವನ್ನೆಲ್ಲ ಹುಸಿ ಮಾಡಿದೆ.

ಮನುಧರ್ಮಶಾಸ್ತ್ರ ನಮ್ಮ ನಿತ್ಯ ಜೀವನವನ್ನು ಇಂದಿಗೂ ನಿಯಂತ್ರಿಸುತ್ತಿದೆ. ಹಿಂದುತ್ವವಾದಿಗಳು ಅಧಿಕಾರ ಕಳೆದು ಕೊಂಡರೂ ಹಿಂದುತ್ವದ ತತ್ವಗಳು ಅಧಿಕಾರಸ್ಥವಾಗಿಯೇ ಇವೆ. ಜಾತಿ ವ್ಯವಸ್ಥೆಯ ಕಟ್ಟಕಡೆಯ ಸಾಲಿನಲ್ಲಿ ದನಿ ಇಲ್ಲದ ನನ್ನ ದಲಿತ ಅಕ್ಕ ತಂಗಿಯರಿದ್ದರೆ ಈ ವ್ಯವಸ್ಥೆಯ ವಿರುದ್ಧ ತುದಿಯಲ್ಲಿರುವುದು ಮೇಲ್ಜಾತಿಯ ಆರ್ಯ ಗಂಡಸರು. ಫ್ಯಾಶಿಸ್ಟ್ ರಾಜಕೀಯ-ಸಾಮಾಜಿಕ ವ್ಯವಸ್ಥೆಯನ್ನು ಸದೃಢ ಗೊಳಿಸಲೆಂದೇ ಹುಟ್ಟಿಕೊಂಡ ಸಂಘಪರಿವಾರದ ಪ್ರವರ್ತಕರು. ಹಿಂದುತ್ವ ಮತ್ತು ದಲಿತ ಮಹಿಳೆ ತದ್ವಿರುದ್ಧವಾದ ಧ್ರುವಗಳು; ಅತಿ ಹೆಚ್ಚು ತುಳಿಯುವ ಯಂತ್ರ ಮತ್ತು ಅತಿ ಹೆಚ್ಚು ತುಳಿತಕ್ಕೊಳಗಾಗುವ ಜನತೆ. ಇವೆರಡರ ನಡುವೆ ತುಳಿಯುವ ಮತ್ತು ತುಳಿತಕ್ಕೊಳಗಾಗುವ ಅನೇಕ ಪ್ರಭೇದಗಳಿವೆ.

ದಲಿತ ಮಹಿಳೆ ಮತ್ತು ಹಿಂದುತ್ವವಾದ ಎಂಬ ವಿರೋಧಿ ಧ್ರುವಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸುವ ಮೊದಲು ಸಂಘಪರಿವಾರವೆಂಬ ಕುಟುಂಬದ ಒಳಗೆ ಪುರುಷ ಪ್ರಧಾನತೆ ಮತ್ತು ಜಾತಿ-ಜಮೀನ್ದಾರಿ ಪದ್ಧತಿ ಹೇಗೆ ಕೈ ಕೈ ಹಿಡಿದು ನಡೆಯುತ್ತವೆ ಎಂದು ನೋಡೋಣ.

ಅಂತಃಸತ್ವವಿಲ್ಲದ ಪರಿವಾರ

ಸಂಘಪರಿವಾರ ಕುಟುಂಬ ಯೋಜನೆಯ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಹೇಗೆ ಬೆಳೆಯುತ್ತಲೇ ಇದೆಯೆಂದರೆ ಇದರ ಸಂತಾನದ ಲೆಕ್ಕವಿಡುವುದೇ ಕಷ್ಟವಾಗಿದೆ. ಒಂದು ಅಂದಾಜಿನ ಪ್ರಕಾರ ಈ ಸಂತಾನದ ಸಂಖ್ಯೆ ಒಂದೂವರೆ ಡಜನ್ ಇರಬಹುದು. ಈ ಕುಟುಂಬಕ್ಕೆ ಮಹಿಳೆಯರು ಸೇರಿದ್ದು ಹೇಗೆ ಎಂದು ಹೇಳುವುದು ಕಷ್ಟವಾದರೂ ಸ್ಥೂಲವಾಗಿ ಈ ಚರಿತ್ರೆಯನ್ನು ಹೀಗೆ ಚಿತ್ರಿಸಬಹುದು: ಏಳು ದಶಕಗಳಷ್ಟು ಹಳೆಯ, ಸಂಘ ಪರಿವಾರದ ಮೂಲ ಸಂಘಟನೆಯಾದ ಆರೆಸ್ಸೆಸ್‌ನಲ್ಲಿ ಮೊದಲು ಮಹಿಳೆಯರಿಗೆ ಪ್ರವೇಶಾಕಾಶವಿರಲಿಲ್ಲ.

ರಾಷ್ಟ್ರೀಯ ಸ್ವಯಂಸೇವಿಕಾ ಸಮಿತಿ ಹುಟ್ಟಿದ್ದು ಆರೆಸ್ಸೆಸ್ ಹುಟ್ಟಿ ಹನ್ನೊಂದು ವರ್ಷಗಳ ನಂತರ- 1936ರಲ್ಲಿ. ಆರೆಸ್ಸೆಸ್‌ನ ಧರ್ಮಪತ್ನಿಯ ರೂಪದಲ್ಲಿ ಹುಟ್ಟಿದ ಈ ಸಂಘಟನೆಯಲ್ಲಿ ಮೊದಲು ಇದ್ದದ್ದು ಆರೆಸ್ಸೆಸ್‌ಗೆ ಸೇರಿದವರ ಮನೆತನಗಳ ಹೆಣ್ಣು ಮಕ್ಕಳು. ಈ ಮಹಿಳಾ ಸಂಘಟನೆ ಮೊದಲಿನಿಂದಲೂ ಎಲೆ ಮರೆಯಲ್ಲಿಯೇ ಉಳಿದಿದೆ. ಆರೆಸ್ಸೆಸ್‌ನಂತೆ ಇಲ್ಲಿಯ ಸದಸ್ಯರೂ ಮೇಲ್ಜಾತಿ ಮತ್ತು ಮಧ್ಯಮ ಜಾತಿಗಳ, ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದವರು.

ಇದರ ಹಿಂದಿನ ರಾಜಕೀಯ ಹಿನ್ನೆಲೆಯ ವಿಷಯಕ್ಕೆ ಬಂದರೆ, ಮಾತೃಶಕ್ತಿ ಎಂಬುದು ಈ ಸಂಘಟನೆಯ ಮೂಲ ಮಂತ್ರ. ಇಲ್ಲಿ ಮುಖ್ಯವಾಗುವುದು ತಾಯ್ತನವೇ ಹೊರತು ಸ್ತ್ರೀತ್ವವಲ್ಲ; ಇಲ್ಲಿ ವೈಭವೀಕರಿಸಲಾಗುವುದು ಸ್ತ್ರೀತನವನ್ನಲ್ಲ, ಸ್ತ್ರೀಯ ಗರ್ಭಕೋಶವನ್ನು. ಈ ಸಂಘಟನೆಯ ಸದಸ್ಯರಿಗೆ ಪ್ರತ್ಯೇಕವಾದ ಶಾಖೆಗಳೂ, ಬೌದ್ಧಿಕ ಎಂದು ಕರೆಯುವ ಕೂಟಗಳು, ಶಸ್ತ್ರಾಸ್ತ್ರಗಳ ಕಸರತ್ತಿನ ಪಾಠಗಳೂ ನಡೆಯುತ್ತವೆ. ಮಹಿಳೆಯರಿಗೆ ಇಲ್ಲಿ ತಾವು ಪ್ರತ್ಯೇಕ ಎಂಬ ಅರಿವನ್ನು ಮೂಡಿಸುವ ಪ್ರಯತ್ನಗಳೂ ಆಮೂಲಾಗ್ರವಾಗಿ ನಡೆಯುವುದರಿಂದ ಆಧುನಿಕ ಸ್ತ್ರೀವಾದದ ಯಾವುದೇ ಆಶೋತ್ತರಗಳಿಗೆ ಇಲ್ಲಿ ಸ್ಥಳ ಇಲ್ಲ.

ಧರ್ಮಪತ್ನಿಯ ಪಾತ್ರದಲ್ಲಿಯೇ ನಡೆಯುವ ಈ ಸಮಿತಿಗಳಲ್ಲಿ ಕಲಿಸುವ ಪಾಠ ಸಮಾಜದ ಅಂತಿಮ ಗುರಿ ಸಾಮರಸ್ಯವೇ ಹೊರತು ಸಮಾನತೆಯಲ್ಲ, ಭೇದ ನೈಸರ್ಗಿಕ ನಿಯಮ ಎಂಬ ಗೋಲ್ವಾಲ್ಕರ್ ಸಿದ್ಧಾಂತ ದಲಿತ ಮತ್ತು ಮಹಿಳೆಯರಿಬ್ಬರಿಗೂ ವ್ಯತಿರಿಕ್ತವಾಗುವ ವಾದ. ದಲಿತ ಮಹಿಳೆಯರ ಸಾಮಾನತೆಯ ಕನಸಿಗಂತೂ ಅದು ಇನ್ನೂ ಮಾರಕವಾದದ್ದು. ಭೇದ, ಅಸಮಾನತೆಗಳು ನೈಸರ್ಗಿಕ ನಿಯಮ ಎನ್ನುವ ವಾದದ ಭಂಡ ಧೈರ್ಯ ಇಲ್ಲಿ ಗಮನಿಸಬೇಕಾದ ಅಂಶ.

ಇವರು ಹೇಳುವ ‘‘ನಿಸರ್ಗ’’ ಯಾರದ್ದು, ಎಲ್ಲಿಯದು ಎಂಬುದನ್ನು ಗೋಲ್ವಾಲ್ಕರ್ ಅವರನ್ನೇ ಕೇಳಬೇಕು. ಇವರ ಮತ್ತು ಇವರ ಹಿಂಬಾಲಕರಾದ ಮೇಲ್ಜಾತಿಯ ಗಂಡಸರ ‘‘ನಿಸರ್ಗ’’ವೇ ಇದು? ಅಥವಾ ಇದು ಅನಾದಿ ಕಾಲದಿಂದ ಬಳುವಳಿಯಾಗಿ ಬಂದ ಯೋಚನೆಗಳ ಗಂಟೆ? ತಮ್ಮ ಈ ‘‘ನಿಸರ್ಗ’’ದಲ್ಲಿ ನಾವು ಯಾಕೆ ಬದುಕಬೇಕೆಂಬುದನ್ನು ದೊಗಳೆ ಖಾಕಿ ಚೆಡ್ಡಿಯ ಸ್ವಯಂ ಸೇವಕರಲ್ಲಿ ಯಾರಾದರೂ ಹೇಳಬಲ್ಲರೇ?

ಇಷ್ಟೊಂದೆಲ್ಲ ಬಡಿವಾರದೊಂದಿಗೆ ಪ್ರಚಾರ ಪಡೆಯುವ ಈ ಸಂಘಪರಿವಾರದ ಆಲೋಚನಾ ಕ್ರಮದಲ್ಲಿ ಹೊಸತೆಂಬುದು ಏನಾದರೂ ಇದೆಯೇ? ಇಲ್ಲ. ಕೆಲವೊಮ್ಮೆ ಸಂಪೂರ್ಣವಾಗಿ ಕೆಲವೊಮ್ಮೆ ಬಿಡಿಬಿಡಿಯಾಗಿ ಪುನರುಚ್ಛರಿಸಲ್ಪಡುವ ಸನಾತನ ಮನುಸ್ಮತಿಯಲ್ಲದೆ ಅಂತಹ ಯಾವುದೂ ಅದರಲ್ಲಿಲ್ಲ. ಜಾತಿ ಪದ್ಧತಿಯ ಬಗ್ಗೆ ಆಲೋಚನೆಗಳು, ಮಹಿಳೆಯರ ಲೈಂಗಿಕತೆಯ ಬಗ್ಗೆ ಮತ್ತೆ ಮತ್ತೆ ಪ್ರಸ್ತಾಪ, ‘ದೈವೀಕೃತ’ ಅಸಮಾನತೆಯಲ್ಲಿ ನಂಬಿಕೆ, ಎಲ್ಲರೂ ಹಾಕಿಕೊಟ್ಟ ಈ ನಿಯಮಗಳ ಅಡಿಯಲ್ಲೇ ಬದುಕಬೇಕೆಂಬ ತಾಕೀತು ಎಲ್ಲವೂ ಮನುಸ್ಮತಿಯ ಪಡಿಯಚ್ಚೇ. ಎಲ್ಲ ಸಂದರ್ಭಗಳಲ್ಲೂ ಮನುವಿನ ಹೆಸರು ಹೇಳದಿದ್ದರೂ, ತಾತ್ಪರ್ಯ ಅದೇ.

ಸಾವಿರಾರು ವರ್ಷಗಳ ನಂತರ ಮನುವಿನ ಕಾಪಿರೈಟು ಅಪ್ರಸ್ತುತವಾಗಿದ್ದರೂ ಯೋಚನೆಗಳಂತೂ ಅಳಿಸಿ ಹೋಗಿಲ್ಲ. ಇಂದಿನ ಬಿಹಾರ ಮತ್ತು ಒರಿಸ್ಸಾ ಪ್ರಾಂತ್ಯಗಳು ಹಿಂದೆ ಆರ್ಯರ ಆಗಮ ಸ್ಥಾನವಾದ ಆರ್ಕಟಿಕ್ ಭೂಭಾಗಕ್ಕೆ ಸೇರಿದ್ದವೆಂದೂ, ಭೂಮಿಯೇ ಅಲ್ಲಿಂದ ಕದಲಿದರೂ ಅಲ್ಲಿನ ಜನ ಕದಲಿಲ್ಲವೆಂದೂ ಹೇಳಿದ ಗೋಲ್ವಾಲ್ಕರ್ ಮನು ಯಾವುದೇ ಕಾಲಕ್ಕೂ ಜಗತ್ತಿನ ಅತಿ ಶ್ರೇಷ್ಠ ನ್ಯಾಯಶಾಸ್ತ್ರಜ್ಞ ಎಂದು ನಂಬಿದ್ದ ವ್ಯಕ್ತಿ. ಅಲ್ಲೊಂದಷ್ಟು ಇಲ್ಲೊಂದಷ್ಟು ವಸಾಹತೋತ್ತರ ಪ್ರಪಂಚದ ಅವಶ್ಯಕತೆಗಳಿಗೆ ಅನುಗುಣವಾಗಿ ತಿದ್ದಿ ತೀಡಿದ್ದರೂ, ಮೂಲ ಅಸಮಾನತೆಯ ಮನುತತ್ವವನ್ನು ನಮ್ಮ ಸಮಾನತೆಯತ್ತ ನಡೆಯುವ ಆಶಯದ ಪ್ರಸ್ತುತ ಸಂದರ್ಭದಲ್ಲಿಯೂ ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಪ್ರಜಾಪ್ರಭುತ್ವದ ಸ್ಥಾಯಿಭಾವವಾದ ಸಮಾನತೆಯನ್ನೇ ಭಂಡತನದಿಂದ ಅಲ್ಲಗಳೆಯುವ ಈ ಪ್ರವೃತ್ತಿ ಸಂಘಪರಿವಾರದ ಫ್ಯಾಶಿಸ್ಟ್ ಮುಖವನ್ನಷ್ಟೇ ಅಲ್ಲದೆ ಸಮಾಜದ ಶ್ರೇಣೀಕೃತ ವ್ಯವಸ್ಥೆಯನ್ನು ಕಾಪಾಡಿಕೊಂಡು ಬರುವ ಹಂಬಲವನ್ನೂ ಬಯಲು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಂಡಾಗ ಚಾರಿತ್ರಿಕವಾಗಿ ಸಮಾಜದಲ್ಲಿ ಹರಿದು ಬಂದಿರುವ ಅಸಮಾನತೆಯನ್ನು ಹೋಗಲಾಡಿಸಲು ಅವಶ್ಯಕವಾದ ಮೀಸಲಾತಿಯನ್ನು ಪರಿವಾರವು ಯಾಕೆ ವಿರೋಧಿಸುತ್ತದೆ ಎಂಬುದು ಅರ್ಥವಾಗುತ್ತದೆ.

ಈ ರೀತಿಯ ಬ್ರೈನ್ ವಾಶಿಂಗಿಗೆ ಒಳಗಾದ ಸಂಘಪರಿವಾರದ ಮಹಿಳೆ ಪರಿವಾರದೊಳಗೆ ನಡೆಯುವ ಲಿಂಗ-ಸಂಬಂಧೀ ತಾರತಮ್ಯಗಳನ್ನು ಗುರುತಿಸಿ ವಿರೋಧಿಸಲಾರದೇ ಹೋಗುತ್ತಾಳೆ. ಮೂಲಭೂತವಾದಿ ಗಳು ಲಿಂಗ-ಸಂಬಂಧೀ ವಿಷಯಗಳನ್ನು ಹೇಗೆ ನಿರ್ವಚಿಸು ತ್ತಾರೆ ಎಂದು ಅರ್ಥ ಮಾಡಿಕೊಳ್ಳುವುದು ಮೂಲಭೂತವಾದವನ್ನು ಅರ್ಥಮಾಡಿಕೊಳ್ಳುವುದಕ್ಕೆ ಅಗತ್ಯ ಎಂಬ ಜಾನ್ ಸ್ಟ್ರಾಟ್ಟನ್ ಹಾಲಿ ಎಂಬ ಸಮಾಜಶಾಸ್ತ್ರಜ್ಞನ ಅಭಿಪ್ರಾಯದ ಹಿನ್ನೆಲೆಯಲ್ಲಿ ಈ ವಿದ್ಯಮಾನಗಳನ್ನು ಗಮನಿಸಬಹುದು.

ವಿವೇಕಾನಂದರನ್ನು ಧಾರಾಳವಾಗಿ ಉದ್ಧರಿಸುವ, ಹಿಂದುತ್ವವಾದಿ ಪುಸ್ತಕದಲ್ಲಿನ ಕೆಲ ಮಾತುಗಳನ್ನು ನೋಡಿ: ‘‘ಪಾತವ್ರತ್ಯ ಒಂದು ದೇಶದ ಜೀವಾಳ. ದೇಶದ ಸಾವಿನ ಮೊದಲ ಲಕ್ಷಣ ಪಾತಿವ್ರತ್ಯದ ನಾಶ ಎಂಬುದನ್ನು ಚರಿತ್ರೆಯಲ್ಲಿ ಉದ್ದಕ್ಕೂ ಕಾಣುತ್ತೇವೆ. ಈ ನಾಶ ಒಂದು ಜನಾಂಗ ಕೊನೆಯಾಗುವ ಸಂಕೇತ.’’ ಸಂಘಪರಿವಾರವು ಮಹಿಳೆಯ ಪಾತಿವ್ರತ್ಯದ ಮೇಲೆ ಒತ್ತು ಕೊಡುವುದಷ್ಟೇ ಅಲ್ಲದೆ ಅದನ್ನು ದೇಶದ, ಜನಾಂಗದ ಅಳಿವು ಉಳಿವಿನ ಪ್ರಶ್ನೆಯಾಗಿಯೂ ಮಾಡುತ್ತದೆ. ಹೀಗಾಗಿ ಇದು ಕೇವಲ ಮಹಿಳೆಯರ ಪಾತಿವ್ರತ್ಯವನ್ನು ಖಡ್ಡಾಯವನ್ನಷ್ಟೇ ಮಾಡದೆ ಒಂದು ಬ್ಯಾಕ್‌ಮೆಯ್ಲಾನ ತಂತ್ರವನ್ನಾಗಿಯೂ ಬಳಸುತ್ತದೆ. ಈ ಪುರುಷ ಪ್ರಧಾನತೆಗೆ ಇಡೀ ಚರಿತ್ರೆಯನ್ನೇ ಬಳಸಿಕೊಳ್ಳಲಾಗುತ್ತದೆ.

‘ಸೇವಿಕಾ ಸಮಿತಿ’ಗೆ ಹೀಗೆ ಚರಿತ್ರೆಯ ಗಿಳಿಪಾಠವನ್ನು ಹೇಳಲಾಗುತ್ತದೆ. ಮಹಿಳೆಯರ ‘ಕೆಳ ದರ್ಜೆಯ’ ಸ್ಥಾನಕ್ಕೆ ದೇಶದ ಮೇಲೆ ಅದ ಪರಕೀಯರ ಆಕ್ರಮಣಗಳೇ ಕಾರಣ ಎಂದು ಹೇಳಲಾಗುತ್ತದೆ. ಈ ಜಾಣತನದ ವಾದ ಎಲ್ಲವನ್ನೂ ವಿದೇಶಿಯರ ಮೇಲೆ ಆರೋಪಿಸುವ ಮೂಲಕ ಸ್ವದೇಶಿ ಜಾತಿ-ಲಿಂಗಗಳ ಶ್ರೇಣಿಕೃತ ವ್ಯವಸ್ಥೆಯನ್ನು ದೋಷಮುಕ್ತ ವನ್ನಾಗಿಸುತ್ತದೆ. ಈ ರೀತಿಯ ವಾದವು ಮುಸ್ಲಿಂ ಗಂಡಸರನ್ನು ಕೇಡಿಗಳಂತೆಯೂ, ಇಡೀ ಮುಸ್ಲಿಂ ಜನಾಂಗವೇ ಹಿಂದೂಗಳ ದ್ವೇಷಕ್ಕೆ ಯೋಗ್ಯವಾದದ್ದೆಂದೂ ಚಿತ್ರೀಕರಿಸುವಲ್ಲಿ ಸಹಾಯಕವಾಗುತ್ತದೆ.

ಮೀನಾ ಕಂದಸಾಮಿ Meena Kandasamy
ಕನ್ನಡಕ್ಕೆ: ಪ್ರೊ. ಬಿ. ಗಂಗಾಧರ ಮೂರ್ತಿ

Leave a comment