Posts Tagged ‘ಆದಿವಾಸಿಗಳು’

ಜಾತಿ-ವಿರೋಧ


ಬುಧವಾರ – ಜೂನ್ -16-2010

ನಾ­ನೆಂದೂ ಬ್ರಾಹ್ಮಣ ವಿರೋಧಿಯಾಗಿಲ್ಲ. ಆದರೆ ಯಾವತ್ತೂ ಜಾತಿ ವಿರೋಧಿಯಾಗಿದ್ದೇನೆ. ದಕ್ಷಿಣದ ಬ್ರಾಹ್ಮಣ ವಿರೋಧ, ಜಾತಿ ವಿರೋಧವಾಗಿ ಪರಿವರ್ತಿತವಾಗಬೇಕೆಂದು ಯೋಚಿಸುವಲ್ಲಿ ನಾನೊಂದು ತಪ್ಪು ಮಾಡಿದೆ. ರೆಡ್ಡಿ, ಮೊದಲಿಯಾರ್ ಹಾಗೂ ನಾಯರ್‌ರೊಳಗಿನ ಆಳುವ ಶಕ್ತಿಗಳು, ಕಳೆದ 50 ವರ್ಷಗಳಲ್ಲಿ ಬ್ರಾಹ್ಮಣರ ಮಟ್ಟಕ್ಕೆ ಬರಲೆಂದೇ ಬ್ರಾಹ್ಮಣ ವಿರೋಧಿಯಾಗಿದ್ದವು. ಈಗ ಅವರ ಮಟ್ಟಕ್ಕೆ-ಕನಿಷ್ಠ ಪಕ್ಷ ರಾಜಕೀಯದ ದೃಷ್ಟಿಯಿಂದ- ಬಂದ ಮೇಲೆ ಅವು ಸಂತೃಪ್ತವಾದಂತಿವೆ. ಇವರು ಮೀಸಲಾತಿಯ ಸಿದ್ಧಾಂತವನ್ನು ಕೈ ಬಿಟ್ಟಿದ್ದಾರೆ. ಒಂದು ಕಾಲಕ್ಕೆ ಬ್ರಾಹ್ಮಣರು ಮಾಡುತ್ತಿದ್ದಂತೆಯೇ ಅವರೂ ಕೂಡ ಈಗ ತಥಾಕಥಿತ ಜಾತಿಯ ಸರಕಾರ ವ್ಯವಸ್ಥೆಗೆ ವಿರೋಧಿಗಳಾಗಿದ್ದಾರೆ. ಜಾತಿಯ ವಿರುದ್ಧದ ಹೋರಾಟದಲ್ಲಿ, ದಕ್ಷಿಣ ಭಾರತ ಇಡೀ ಭಾರತಕ್ಕೆ ಮುಂದಾಳುತನ ವಹಿಸಬಲ್ಲದೆನ್ನುವ ನನ್ನ ಆಸೆಗೆ ಸದ್ಯಕ್ಕಂತೂ ಗ್ರಹಣ ಹಿಡಿದಿದೆ. ಕಾಪು, ಇಳವ, ಮಾಳಮಾದಿಗ, ಅನ್ನಾರ, ಆದಿವಾಸಿ, ಕ್ರಿಶ್ಚಿಯನ್ನರು ಹಾಗೂ ಇಂಥ ಮತ್ತಿತರರು, ಹಾಲಿ, ಸ್ತ್ರೀಯರೂ ಸಹ ಮೇಲೆದ್ದು ಚುನಾವಣೆಯಲ್ಲಿ ಪರಿಣಾಮಕಾರಿಯಾಗದ ಹೊರತು ಆಸೆಯೇ ಅಂಕುರಿಸಲಾರದು. ರೆಡ್ಡಿ, ನಾಯರ್, ಮೊದಲಿಯಾರರು ಹಿಂದುಳಿದ ಜಾತಿಯವರಲ್ಲವೇ ಅಲ್ಲ. ಅವರೆಂದೂ ಹಿಂದುಳಿದಿಲ್ಲ. ಧರ್ಮ ಎಂದೂ ತಮಗೆ ಪ್ರತಿಷ್ಠಿತ ಸ್ಥಾನ ನೀಡಲಿಲ್ಲವೆನ್ನುವ ಒಂದೇ ವ್ಯತ್ಯಾಸದೊಂದಿಗೆ ಇವರು, ಕ್ಷತ್ರಿಯರು, ವೈಶ್ಯರು ಹಾಗೂ ಕಾಯಸ್ಥರಂತೇ ಇದ್ದಾರೆ. ಅವಕಾಶದಿಂದ ಅರ್ಹತೆ ಹೊರಹೊಮ್ಮುತ್ತದೆನ್ನುವ ಹೊಸ ಸಿದ್ಧಾಂತವನ್ನು ಅಂಗೀಕರಿಸಲೇಬೇಕು. ಭಾರತದ ಜನಸಂಖ್ಯೆಯ ಶೇ.90ರಷ್ಟಾಗಿರುವ ಶೂದ್ರ, ಹರಿಜನ, ಮತೀಯ ಅಲ್ಪಸಂಖ್ಯಾತರೊಳಗಿನ ಹಿಂದುಳಿದ ಜಾತಿಗಳು, ಆದಿವಾಸಿಗಳು ಹಾಗೂ ಎಲ್ಲ ಸ್ತ್ರೀಯರಿಗೆ ದೇಶದ ಎಲ್ಲ ಉನ್ನತ ಅವಕಾಶಗಳ ಶೇ.60ರಷ್ಟನ್ನು ನೀಡಲೇಬೇಕು. ಅತ್ಯುನ್ನತ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ತತ್ತ್ವ ಅನ್ವಯವಾಗುತ್ತದೆ. ಈ ವಿಷಯದಲ್ಲಿ ಪ್ರಧಾನಿಯವರ ವಾದಗಳನ್ನು -ಆ ವಾದಗಳು ಕಪಟ ರೀತಿಯಲ್ಲಿ ಅರ್ಹತೆ, ಸಾಮರ್ಥ್ಯವನ್ನು ಆಧರಿಸಿವೆ-ಸಂಪೂರ್ಣವಾಗಿ ಅಲ್ಲಗಳೆಯುತ್ತೇನೆ. ದಿಲ್ಲಿಯ ಬಹುತೇಕ ಎಲ್ಲ ಆಡಳಿತಾಧಿಕಾರಿಗಳು, ಲೋಕಸಭೆಯ ಕಾರ್ಯದರ್ಶಿ, ಅಮೆರಿಕೆಯಲ್ಲಿನ ಭಾರತೀಯ ರಾಯಭಾರಿ ಇವರೆಲ್ಲ ಕಾಶ್ಮೀರಿ ಪಂಡಿತರೆ (ವರ್ಷ ಅಥವಾ ಎರಡು ವರ್ಷಗಳಲ್ಲಿ ಪ್ರಧಾನ ದಂಡನಾಯಕ ಕೂಡ ಕಾಶ್ಮೀರಿ ಪಂಡಿತನೇ ಆಗಬಹುದು)-ಹೀಗೇಕೆ ಎನ್ನುವ ಪ್ರಶ್ನೆ ಕೇಳಬೇಕಾಗಿದೆ. ಇದನ್ನು ಪ್ರಧಾನಿಯ ವಿರುದ್ಧ ವೈಯಕ್ತಿಕ ದ್ವೇಷದವೆಂದು ಬಗೆಯಬಾರದು. ಯಾಕೆಂದರೆ ಸದ್ಯದ ಉತ್ತರ ಪ್ರದೇಶದ ಮುಖ್ಯಮಂತ್ರಿ; ಬಹುತೇಕ ಎಲ್ಲ ಉನ್ನತ ಸ್ಥಾನಗಳಿಗೆ ತನ್ನ ಜಾತಿಯವರನ್ನೇ ನೇಮಕ ಮಾಡಿದ್ದಾರೆ; ಹಿಂದೆ ಕಾಯಸ್ಥ ಮುಖ್ಯಮಂತ್ರಿ ಮಾಡಿದಂತೆ. ಒಬ್ಬ ವ್ಯಕ್ತಿ ತನ್ನೆಡೆಗೆ ತನ್ನ ಜಾತಿಯವರನ್ನೇ ಸೇರಿಸಿಕೊಳ್ಳುತ್ತಿರುವ ನಿಯಮವೊಂದು ನಮ್ಮ ದೇಶದಲ್ಲಿ ಪ್ರಚಲಿತವಾಗುತ್ತಿದೆ. ಯಾಕೆಂದರೆ ಅವರ ಭವಿಷ್ಯ ವೈಯಕ್ತಿಕವಾಗಿ ಪರಸ್ಪರರನ್ನೇ ಅವಲಂಬಿಸಿದಂತಿದೆ. ಈ ದೇಶವನ್ನು ಹೊಲಸುಗೆಡಿಸುತ್ತಿರುವ ಅಪಾಯಕಾರಿ ಜಾಲವನ್ನು ಕಿತ್ತೆಸೆಯಲು ಸುಯೋಜಿತ ಪ್ರಯತ್ನ ನಡೆಯಲೇಬೇಕು. ಜಾತಿಯ ಬಗ್ಗೆ ಮಾತಾಡಕೂಡದೆನ್ನುವುದರ ಅರ್ಥ ಭಾರತೀಯ ಸಂದರ್ಭದ ಏಕೈಕ ಮಹತ್ವದ ಸತ್ಯವನ್ನು ನೋಡದೆ ಕಣ್ಣು ಮುಚ್ಚುವುದೆಂದಾಯಿತು. ಬರಿ ಜಾತಿ ಹೊರಟು ಹೋಗಲೆಂದರೆ ಅದು ಹೊರಟು ಹೋಗುವುದಿಲ್ಲ. 5000 ವರ್ಷ ಹಳೆಯದಾಗಿರುವ ಸಾಮರ್ಥ್ಯಗಳ ಆಯ್ಕೆ ನಡೆದೇ ಇದೆ. ನಿರ್ದಿಷ್ಟ ಜಾತಿಗಳು ವಿಶೇಷ ಪ್ರತಿಭೆ ಪಡೆದಿವೆ. ಉದಾಹರಣೆಗೆ ಉದ್ದಿಮೆ ಹಾಗೂ ಹಣಕಾಸಿನ ವಿಷಯದಲ್ಲಿ ಮಾರವಾಡಿ, ಬನಿಯಾ ಮೇಲುಗೈ ಸಾಧಿಸಿದರೆ, ಸಾರಸ್ವತ ಬ್ರಾಹ್ಮಣ ಬೌದ್ಧಿಕ ಕ್ಷೇತ್ರದಲ್ಲಿ; ಇತರರಿಗೆ ಆದ್ಯತೆಯ ಅವಕಾಶ ಹಾಗೂ ವಿಶೇಷಾಧಿಕಾರ ನೀಡದ ಹೊರತು ಈ ಜಾತಿಗಳೊಂದಿಗೆ ಸ್ಪರ್ಧಿಸುವ ಮಾತು ಅಸಂಗತವಾಗುತ್ತದೆ. ಸಾಮರ್ಥ್ಯಗಳ ಸಂಕುಚಿತ ಆಯ್ಕೆಯನ್ನು ಒಟ್ಟಾರೆ ವಿಸ್ತಾರ ಗೊಳಿಸಬೇಕು. ಅದನ್ನು ಮಾಡಬೇಕಿದ್ದರೆ ಎರಡು-ಮೂರು ದಶಕಗಳವರೆಗೆ, ಹಿಂದುಳಿದ ಜಾತಿ ಹಾಗೂ ಸಮೂಹಗಳಿಗೆ ಆದ್ಯತೆಯ ಅವಕಾಶಗಳನ್ನು ಕಲ್ಪಿಸಿಕೊಡ ಬೇಕಾಗುತ್ತದೆ. ಉದ್ಯೋಗ ಹಾಗೂ ಶಿಕ್ಷಣದ ಅವಕಾಶಗಳ ಭೇದವಿದೆಯೆನ್ನುವುದನ್ನು ತೋರಿಸಬೇಕಾಗಿದೆ. ಯಾವುದೇ ವ್ಯಕ್ತಿಗೆ ಆತನ ಜಾತಿಯ ಕಾರಣದಿಂದಾಗಿ ಶೈಕ್ಷಣಿಕ ಸಂಸ್ಥೆಯ ಬಾಗಿಲನ್ನು ಮುಚ್ಚಕೂಡದು. ಸಮಾಜ ಇಲ್ಲಿಯವರೆಗೆ ವಿಶೇಷ ಅಧಿಕಾರ ನೀಡಿರುವವರಿಗೆ ಉದ್ಯೋಗದಿಂದ ದೂರವಿಟ್ಟರೆ ಅದು ನ್ಯಾಯವಾಗಿ ನಡೆದುಕೊಂಡಂತಾಗುತ್ತದೆ. ಬೇರೆಡೆಯಲ್ಲಿ ಅವರು ತಮ್ಮ ಜೀವನೋಪಾಯ ಕಂಡುಕೊಳ್ಳಲು ಅವರಿಗೆ ಅವಶ್ಯವಿರುವ ಶೈಕ್ಷಣಿಕ ಸಾಮರ್ಥ್ಯ ನೀಡುವುದಷ್ಟೇ ಸಮಾಜ ಮಾಡಬೇಕಾದದ್ದು.

-ಡಾ. ರಾಮಮನೋಹರ ಲೋಹಿಯಾ

curtys: Varthabharathi

http://beta.varthabharathi.net/Writer/12710/