Posts Tagged ‘ಶೂದ್ರ ಮಹಿಳೆ’

ಜಾತಿ ಜನಗಣತಿ ಒಡೆಯುವುದಿಲ್ಲ, ದೇಶವನ್ನು ಒಂದಾಗಿಸುತ್ತದೆ


VB’s Editorial

ಜಾತಿ ಜನಗಣತಿ ಒಡೆಯುವುದಿಲ್ಲ, ದೇಶವನ್ನು ಒಂದಾಗಿಸುತ್ತದೆ

ಬುಧವಾರ – ಜೂನ್ -16-2010

ಜಾತಿ ಜನಗಣತಿಯಿಂದ ಒಡೆದು ಆಳುವ ನೀತಿಯನ್ನು ಎತ್ತಿ ಹಿಡಿದಂತಾಗುತ್ತದೆಯೇ? ಕೆಲವು ಸ್ಥಾಪಿತ ಹಿತಾಸಕ್ತಿಗಳು ಪದೇ ಪದೇ ಇಂತಹದೊಂದು ಅಭಿಪ್ರಾಯವನ್ನು ತೇಲಿ ಬಿಟ್ಟು, ಜಾತಿ ಜನಗಣತಿಯ ಚರ್ಚೆಯನ್ನು, ಅನಿವಾರ್ಯತೆಯನ್ನು ದಾರಿತಪ್ಪಿಸುವ ಪ್ರಯತ್ನ ನಡೆಸುತ್ತಿವೆ. ಜಾತಿ ಜನಗಣತಿಯಿಂದ ದೇಶದ ಅಖಂಡತೆಗೆ ಧಕ್ಕೆಯಿದೆಯೆನ್ನುವಂತಹ ಅಭಿಪ್ರಾಯ ಬರುವ ಮಾತುಗಳನ್ನು ಸ್ವತಃ ಕಾಂಗ್ರೆಸ್‌ನೊಳಗಿನ ನಾಯಕರೂ ವ್ಯಕ್ತಪಡಿಸಿದ್ದರು. ಹೌದೆ? ಜಾತಿ ಜನಗಣತಿಯೆಂದರೆ ಒಡೆದು ಆಳುವ ನೀತಿಯ ಮರು ಅನುಷ್ಠಾನವೆ?

ಇಷ್ಟಕ್ಕೂ ಈ ದೇಶದಲ್ಲಿ ಒಡೆದು ಆಳುವ ನೀತಿಯನ್ನು ಅನುಷ್ಠಾನಕ್ಕೆ ತಂದವರು ಯಾರು? ಬ್ರಿಟಿಷರೆ? ಇದು ಮೊತ್ತ ಮೊದಲು ಚರ್ಚೆಯಾಗಬೇಕಾದ ವಿಷಯ. ಬ್ರಿಟಿಷರು ಈ ದೇಶದ ಹಿಂದೂ ಮತ್ತು ಮುಸ್ಲಿಮರ ನಡುವೆ ಒಡೆದು ಆಳುವ ನೀತಿಯನ್ನು ಜಾರಿಗೆ ತಂದರು. ದೇಶದ ಸೇನೆಯನ್ನು ಒಡೆದರು. ಸ್ವಾತಂತ್ರ ಹೋರಾಟಗಾರರನ್ನು ಒಡೆದರು. ಜನರನ್ನು ಒಡೆದರು. ಬಂಗಾಳವನ್ನೇ ಒಡೆದರು. ಆದರೆ ಮುಂದೆ, ಬ್ರಿಟಿಷರ ಈ ಒಡೆದು ಆಳುವ ನೀತಿಯ ವಿರುದ್ಧವೇ ಒಂದು ದೊಡ್ಡ ಚಳವಳಿ ನಡೆಯಿತು.ಅದು ಬೇರೆ ವಿಷಯ.

ಆದರೆ, ಒಡೆದು ಆಳುವ ನೀತಿಯನ್ನು ಜಾರಿಗೆ ತರಲು ಬ್ರಿಟಿಷರಿಗೆ ಮಾರ್ಗದರ್ಶಿಯಾದವರು ಯಾರು? ಒಡೆದು ಆಳುವ ನೀತಿಯನ್ನು ಅವರು ಯಾರಿಂದ ಕಲಿತರು?
ಈ ದೇಶಕ್ಕೆ ಬ್ರಿಟಿಷರು, ಮೊಗಲರು ಕಾಲಿಡುವ ಮೊದಲೇ ಅಂದರೆ ಶತಶತಮಾನಗಳ ಹಿಂದೆಯೇ ಇಲ್ಲಿ ಒಡೆದು ಆಳುವ ನೀತಿ ಜಾರಿಯಲ್ಲಿತ್ತು. ಪಂಚಮರು ಅಂದರೆ ದಲಿತರು ಊರಿಗೆ ಕಾಲಿಡಬಾರದು, ಸಾರ್ವಜನಿಕ ನೀರನ್ನು ಮುಟ್ಟಬಾರದು. ಶೂದ್ರರು ವಿದ್ಯೆ ಕಲಿಯಬಾರದು. ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರಿಗಾಗಿ ದುಡಿಯಬೇಕು. ಅವರ ಸೇವೆಯಿಂದಲೇ ಶೂದ್ರರಿಗೆ ಮುಕ್ತಿ. ವೈಶ್ಯರು ಮಾತ್ರ ವ್ಯಾಪಾರ ಮಾಡಬೇಕು.

ಕ್ಷತ್ರಿಯರು ಮಾತ್ರ ದೇಶ ಆಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕ್ಷತ್ರಿಯರು, ವೈಶ್ಯರು ಸೇರಿದಂತೆ ಎಲ್ಲರೂ ಬ್ರಾಹ್ಮಣರಿಗೆ ತಲೆಬಾಗಬೇಕು. ಬ್ರಹ್ಮನ ತಲೆಯಿಂದ, ತೋಳಿನಿಂದ, ಎದೆಯಿಂದ, ಕಾಲಿನಿಂದ ಹುಟ್ಟಿದವರು ಎಂಬಿತ್ಯಾದಿ ಹೆಸರಲ್ಲಿ ಸಮಾಜವನ್ನು ಒಡೆದು, ಅವರನ್ನು ಆಳಿದ್ದು ಬ್ರಿಟಿಷರೂ ಅಲ್ಲ, ಮೊಗಲರೂ ಅಲ್ಲ, ದೆಹಲಿ ಸುಲ್ತಾನರೂ ಅಲ್ಲ. ಇದೇ ನೆಲದಲ್ಲಿ ಹುಟ್ಟಿದ ಮೇಲ್ವರ್ಣೀಯರೇ ಒದು ಆಳುವ ನೀತಿಗೆ ತಳಹದಿಯನ್ನು ಹಾಕಿ ಕೊಟ್ಟವರು.

ಒಡೆದು ಆಳುವ ನೀತಿಯ ಬೇರು, ಈ ದೇಶದ ವರ್ಣಾಶ್ರಮದಲ್ಲಿದೆ.ಒಂದೆರಡು ಶತಮಾನವಲ್ಲ, ಹಲವು ಸಹಸ್ರ ವರ್ಷಗಳ ಕಾಲ ಜಾತಿಯ ಆಧಾರದಲ್ಲಿ ಈ ದೇಶದ ಜನರನ್ನು ಒಡೆದು, ಸುಖಸುಪ್ಪತ್ತಿಗೆಯಲ್ಲಿ ಬದುಕಿದವರು ಇಲ್ಲಿನ ಮೇಲ್ವರ್ಣೀಯರು. ಅದರ ಫಲವಾಗಿ ಇಲ್ಲಿನ ಶೂದ್ರರು ಮತ್ತು ಪಂಚಮರು ಅಥವಾ ದಲಿತರು ತಮ್ಮ ಬದುಕನ್ನು ಸಂಪೂರ್ಣ ಮೇಲ್ವರ್ಣೀಯರ ಸುಖಕ್ಕಾಗಿ ಅರ್ಪಿಸಬೇಕಾಯಿತು. ವಿದ್ಯೆಯಿಲ್ಲದೆ, ಸ್ವಾತಂತ್ರವಿಲ್ಲದೆ ನರಳಬೇಕಾಯಿತು.

ಸಣ್ಣ ಸಂಖ್ಯೆಯ ಮೇಲ್ವರ್ಣೀಯರು ಬಹುಸಂಖ್ಯೆಯ ಜನರನ್ನು ಜಾತಿಯ ಹೆಸರಿನಲ್ಲಿ ಒಡೆಯುವ ಮೂಲಕ ಅವರನ್ನು ಬರ್ಬರವಾಗಿ ಶೋಷಿಸಿದರು.ಅಂತಹ ಶೋಷಣೆಯನ್ನು ಬ್ರಿಟಿಷರಾಗಲಿ, ಮೊಗಲರಾಗಲಿ ಈ ದೇಶದ ಜನರ ಮೇಲೆ ನಡೆಸಲಿಲ್ಲ. ಬ್ರಿಟಿಷರು ಈ ದೇಶಕ್ಕೆ ಕಾಲಿಟ್ಟಾಗ ಈ ನೆಲದಲ್ಲಿ ಒಡೆದು ಆಳುವ ನೀತಿ ಜಾರಿಯಲ್ಲಿತ್ತು. ಬ್ರಿಟಿಷರು ಇಲ್ಲಿಯ ಜನರನ್ನು ಗುಲಾಮರಾಗಿಸುವ ಮೊದಲೇ, ಇಲ್ಲಿರುವ ಬಹುಸಂಖ್ಯೆಯ ಜನರು ಸಣ್ಣ ಸಂಖ್ಯೆಯ ಮೇಲ್ವರ್ಣೀಯ ಬ್ರಾಹ್ಮಣರ ಗುಲಾಮರಾಗಿ ಬದುಕುತ್ತಿದ್ದರು.

ಕೇರಳದಂತಹ ರಾಜ್ಯದಲ್ಲಿ, ನಂಬೂದಿರಿಗಳ ಎದುರುಗಡೆ ಶೂದ್ರ ಮಹಿಳೆಯರು ರವಿಕೆಯನ್ನೂ ಧರಿಸುವಂತಿರಲಿಲ್ಲ. ಮಾನಮುಚ್ಚಿ ಬದುಕುವಂತಿರಲಿಲ್ಲ. ಮೇಲ್ವರ್ಣೀಯರ ಕ್ರೌರ್ಯ, ಒಡೆದು ಆಳುವ ರಾಜಕೀಯವನ್ನು ನೋಡಿ ಬ್ರಿಟಿಷರೇ ಬೆಚ್ಚಿ ಬಿದ್ದಿದ್ದರು. ಬ್ರಿಟಿಷರು ಕೆಲವು ಕಠೋರ ಕಾಯ್ದೆ ತಂದ ಬಳಿಕವಷ್ಟೇ ಬ್ರಾಹ್ಮಣರ ತಂತ್ರಕ್ಕೆ ಸೋಲಾಯಿತು. ಇಂದಿಗೂ ಒಡೆದು ಆಳುವ ಮೇಲ್ವರ್ಣೀಯರ ತಂತ್ರದ ಪ್ರಭಾವದಿಂದ ಶೋಷಿತ ಜನ ಹೊರಬಂದಿಲ್ಲ. ಜಾತಿ ಈ ದೇಶದಲ್ಲಿ ಇನ್ನೂ ಉಳಿದಿರುವುದೇ ಅದಕ್ಕೆ ಉದಾಹರಣೆ.

ಜಾತಿ ಜನಗಣತಿ ನಡೆಸುವುದು ದೇಶವನ್ನು ಒಡೆಯುವುದಕ್ಕಲ್ಲ. ಒಡೆದ ದೇಶವನ್ನು ಒಂದಾಗಿಸುವುದಕ್ಕಾಗಿ ಜಾತಿ ಜನಗಣತಿ ನಡೆಸಬೇಕಾಗಿದೆ. ಮೇಲ್ವರ್ಣೀಯರು ಒಡೆದ ಈ ಸಮಾಜವನ್ನು ಮತ್ತೆ ಮರು ಜೋಡಿಸುವುದಕ್ಕಾಗಿ ಜಾತಿ ಜನಗಣತಿಯನ್ನು ನಡೆಸಬೇಕು. ಇರುವ ಜಾತಿಗಳನ್ನು ಗುರುತಿಸಿ, ಅದರಲ್ಲಿ ಇನ್ನೂ ಮೇಲ್ವರ್ಣೀಯರ ಒಡೆದು ಆಳುವ ನೀತಿಗೆ ಬಲಿಯಾಗಿ, ಶೋಷಣೆಗೊಳಗಾಗುತ್ತಿರುವ ದುರ್ಬಲ ಜಾತಿಗಳನ್ನು ಗುರುತಿಸಬೇಕು.

ಬಳಿಕ ಅವುಗಳನ್ನು ಸಬಲವನ್ನಾಗಿಸುವ ಕೆಲಸ, ಬಲಿಷ್ಠವನ್ನಾಗಿಸುವ ಕೆಲಸ ನಡೆಯಬೇಕು. ಮೇಲ್ವರ್ಣೀಯರ ಹಿಡಿತದಿಂದ ಅವರನ್ನು ಸಂಪೂರ್ಣ ಸ್ವತಂತ್ರಗೊಳಿಸಬೇಕು. ಆ ಮೂಲಕ ಹಿಂದೂ ಧರ್ಮ ಬಲಿಷ್ಠವಾಗುತ್ತದೆ. ಜೊತೆಗೆ ದೇಶವೂ ಬಲಿಷ್ಠವಾಗುತ್ತದೆ. ಆದುದರಿಂದ ಜಾತಿ ಜನಗಣತಿ ನಡೆಯಲೇ ಬೇಕು. ಒಡೆದು ಆಳುವ ನೀತಿಯ ಹುನ್ನಾರಗಳ ವಿರುದ್ಧ ಜಾತಿ ಜನಗಣತಿ ಒಂದು ದೊಡ್ಡ ಅಸ್ತ್ರವಾಗಿದೆ. ಇದನ್ನು ವಿರೋಧಿಸುವವರು ಬಿಜೆಪಿಗರಿರಲಿ, ಆರೆಸ್ಸೆಸ್‌ಗರಿರಲಿ, ಕಾಂಗ್ರೆಸ್‌ಗರಿರಲಿ. ಅವರು ಜಾತಿ ಜನಗಣತಿಗೆ ಯಾಕೆ ಹೆದರುತ್ತಾರೆ ಎನ್ನುವುದನ್ನು ಇಲ್ಲಿ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.

varthabharathi…