Posts Tagged ‘ಮೀಸಲಾತಿ’

ಮುಚ್ಚಿಡಲ್ಪಟ್ಟ ಅಂಬೇಡ್ಕರ್ ಭವ್ಯ ಇತಿಹಾಸ


ಮುಚ್ಚಿಡಲ್ಪಟ್ಟ ಅಂಬೇಡ್ಕರ್ ಭವ್ಯ ಇತಿಹಾಸ

ರವಿವಾರ – ಜೂನ್ -27-2010

varthabharathi

ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರ ಬಗ್ಗೆ ಈ ದೇಶದ ಜನತೆಗೆ ಏನು ಗೊತ್ತು? ಗೊತ್ತಿರುವುದಿಷ್ಟೆ. ಅಂಬೇಡ್ಕರರು ಯಾರೂ ಮುಟ್ಟಿಸಿಕೊಳ್ಳಲಾಗದ ಒಂದು ಕೀಳು ಜಾತಿಯಲ್ಲಿ ಹುಟ್ಟಿದರು. ಬಾಲ್ಯ ದಿಂದಲೇ ಅಸ್ಪಶತೆಯ ನೋವನ್ನು ಅನುಭವಿಸಿ ದರು. ತಮ್ಮ ತಂದೆಯನ್ನು ನೋಡಲು ಗಾಡಿಯಲ್ಲಿ ಹೋಗುತ್ತಿದ್ದಾಗ ಗಾಡಿಯಿಂದ ತಳ್ಳಲ್ಪಟ್ಟರು.

ಹೀಗೆ ಅವಮಾನಕ್ಕೊಳಗಾದ ಅಂಬೇಡ್ಕರ್ ಮುಂದೆ ಉನ್ನತ ಜ್ಞಾನಪಡೆದು ಈ ದೇಶದ ‘ಸಂವಿಧಾನ ಶಿಲ್ಪಿ’ ಎನಿಸಿ ಕೊಂಡರು. ಅಸ್ಪಶರ ಉದ್ಧಾರಕ್ಕಾಗಿ ಹೋರಾಡಿದರು ಎಂಬುದಷ್ಟೆ. ಬಹುಶಃ ಇದ ಕ್ಕಿಂತ ಹೆಚ್ಚಿಗೆ ಅಂಬೇಡ್ಕರರ ಬಗ್ಗೆ ಈ ದೇಶದ ಜನತೆಗೆ ಗೊತ್ತಿರುವುದು ಸಾಧ್ಯವಿಲ್ಲ. ಅಥವಾ ಮೇಲೆ ಹೇಳಿರುವುದೇ ಹೆಚ್ಚಿರಬೇಕು! ದಲಿತರಿಗೆ ಮೀಸಲಾತಿ ತಂದುಕೊಟ್ಟದಷ್ಟೇ ಅವರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ತನ್ಮೂಲಕ ಅಂಬೇಡ್ಕರ್ ಎಂಬ ‘ಮಹಾನ್ ಇತಿಹಾಸವನ್ನು’ ಮುಚ್ಚಲಾಗುತ್ತಿದೆ!

ಹಾಗಿದ್ದರೆ ಅಂಬೇಡ್ಕರ್‌ರ ಸಾಧನೆ ಇದಿಷ್ಟು ಮಾತ್ರವಾ? ಅಥವಾ ಇನ್ನೇನು ಇಲ್ಲವಾ? ಯಾಕೆಂದರೆ 2006ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೇರಿಕದ ಅಧ್ಯಕ್ಷ ಜಾರ್ಜ್‌ಬುಷ್ ‘ಗಾಂಧಿ, ಠಾಗೋರ್ ಮತ್ತು ನೆಹರೂ’ರವರನ್ನು ನವ ಭಾರತದ ನಿರ್ಮಾತೃಗಳೆನ್ನುತ್ತಾರೆ. ಅಂಬೇಡ್ಕರ್ ರನ್ನು ಈ ಪರಿಯಲ್ಲಿ ಇತಿಹಾಸದಲ್ಲಿ ಕಬ್ಜರನ್ನಾಗಿ ಸುವ ಅಥವಾ ಮರೆಮಾಚುವ ಪ್ರಯತ್ನ ನಿರಂತರ ವಾಗಿ ನಡೆಯುತ್ತಿರುವಾಗ ಬುಷ್‌ರಂತಹವರು ಇದಕ್ಕಿಂತ ಹೆಚ್ಚಿಗೆ ಇನ್ನೇನನ್ನು ತಾನೆ ಹೇಳಿ ಯಾರು? ಈ ಹಿನ್ನೆಲೆಯಲ್ಲಿ ಹೊರಜಗತ್ತಿಗೆ ಅಂಬೇಡ್ಕರ್‌ರ ನೈಜ ಸಾಧನೆಗಳನ್ನು ಬಿಚ್ಚಿ ಹೇಳಬೇಕಾಗಿದೆ. ಇತಿಹಾಸದಲ್ಲಿ ಅವರನ್ನು ಮರೆಮಾಚಲು ನಡೆಯುತ್ತಿರುವ ದುಷ್ಟ ಪ್ರಯತ್ನವನ್ನು ತಡೆಯಬೇಕಾಗಿದೆ.

ಹಾಗಿದ್ದರೆ ಅಸ್ಪಶರ ಉದ್ಧಾರವನ್ನು ಸಂವಿ ಧಾನ ರಚನೆಯನ್ನು ಹೊರತುಪಡಿಸಿ ಅಂಬ್ಕೇಡರ್‌ರ ಇನ್ನೇನೇನು ಸಾಧನೆಗಳಿವೆ? ಪಟ್ಟಿ ಮಾಡುತ್ತಾ ಹೋದರೆ ‘ಬಾಬಾ ಸಾಹೇಬ’ರ ವ್ಯಕ್ತಿತ್ವ ಗಾಂಧಿ ಎಂಬ ‘ಮಹಾತ್ಮ’ರನ್ನೂ, ಠಾಗೋರ್ ಎಂಬ ‘ಗುರುದೇವ’ರನ್ನೂ, ನೆಹರೂ ಎಂಬ ‘ಚಾಚಾ’ ರನ್ನೂ ಮೀರಿ ಬೆಳೆಯುತ್ತದೆ. ಏಕೆಂದರೆ ಈ ದೇಶದಲ್ಲಿ ಪ್ರಪ್ರಥಮವಾಗಿ ರೈತರ ಪರ ದನಿ ಎತ್ತಿದ್ದು ಅಂಬೇಡ್ಕರ್.

ಈ ದೇಶದ ಮಹಿಳೆಯ ರಿಗೆ ‘ಹಿಂದೂ ಸಂಹಿತೆ ಮಸೂದೆಯ ಮೂಲಕ ನ್ಯಾಯ ದೊರಕಿಸಿಕೊಡಲು ಹೋರಾಡಿದ್ದು ಅಂಬೇಡ್ಕರ್. ಅಚ್ಚರಿಯ ವಿಷಯವೆಂದರೆ ಈ ದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್.ಬಿ.ಐ) ಸ್ಥಾಪಿಸಲು ಕಾರಣರಾ ದದ್ದು ಕೂಡ ಅಂಬೇಡ್ಕರ್‌ರೆ.

ಹಿಂದೂ ಸಾಮಾಜಿಕ ಸುಧಾರಣೆಗೆ ಯತ್ನಿಸಿದ್ದು, ಪಾಕಿಸ್ತಾನ ವಿಷಯ, ಕಾರ್ಮಿಕ ನೀತಿ, ವಿದ್ಯುತ್ ಮತ್ತು ನೀರಾವರಿ ನೀತಿ, ದಾಮೋದರ ಕಣಿವೆ ಯೋಜನೆ, ಹಿರಾಕುಡ್ ಯೋಜನೆ, ಸೋನ್ ಕಣಿವೆ ಯೋಜನೆ, ಎರಡನೆ ಮಹಾಯುದ್ಧದ ನಂತರ ದೇಶದ ಆರ್ಥಿಕ ನೀತಿ ರೂಪಿಸಿದ್ದು. ಅಬ್ಬಬ್ಬಾ ಪಟ್ಟಿ ಮಾಡುತ್ತಾ ಹೋದರೆ ಅಂಬೇಡ್ಕರ್‌ರು ಇದಕ್ಕೆಲ್ಲ ಕಾರಣರಾ ಎಂದೆನಿಸುತ್ತದೆ. ವಾಸ್ತವವೆಂದರೆ ಇವು ಅವರ ಮುಚ್ಚಿಟ್ಟ ಇತಿಹಾಸದ ಕೆಲವು ತುಣುಕುಗಳು ಅಷ್ಟೇ!

ಉದಾಹರಣೆಗೆ ಹೇಳುವುದಾದರೆ 1945ರಲ್ಲಿ ಎರಡನೆ ಮಹಾಯುದ್ಧದ ನಂತರ ಈ ದೇಶದ ಕೃಷಿ, ಕೈಗಾರಿಕೆ, ಆರ್ಥಿಕ ಸ್ಥಿತಿ, ಪುನರ್ವಸತಿ ಮತ್ತು ಸೈನಿಕರ ಕಲ್ಯಾಣಕ್ಕಾಗಿ ‘ಪುನರುಜ್ಜೀವನ ಸಮಿತಿ ಸಭೆ’ ಬ್ರಿಟಿಷ್ ಗವರ್ನರ್ ಜನರಲ್‌ರಿಂದ ರಚಿಸಲ್ಪಟ್ಟಿತು. ಅಂಬೇ ಡ್ಕರ್ ಆ ಸಮಿತಿಯ ಸದಸ್ಯರಾಗಿದ್ದರು ಮತ್ತು ಅವರಿಗೆ ‘ನೀರಾವರಿ ಮತ್ತು ವಿದ್ಯುಚ್ಛಕ್ತಿ ನೀತಿ ನಿರೂ ಪಣಾ ಸಮಿತಿ’ಯ ಜವಾಬ್ದಾರಿಯನ್ನು ವಹಿಸಲಾಯಿತು.

ಆಸಕ್ತಿದಾಯಕ ವಿಷಯವೇನೆಂದರೆ ಆ ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್ ಅದ್ಭುತವಾದ ಸಾಧನೆ ಮಾಡಿದ್ದಾರೆ. 1942ರಿಂದ 1946ರ ವರೆಗೆ ಗವರ್ನರ್ ಜನರಲ್‌ರವರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕ್ಯಾಬಿನೆಟ್ ಮಂತ್ರಿಯ ಸ್ಥಾನ ಪಡೆದಿದ್ದ ಅವರಿಗೆ ಕಾರ್ಮಿಕ, ನೀರಾವರಿ ಮತ್ತು ವಿದ್ಯುಚ್ಛಕ್ತಿ ಇಲಾಖೆಗಳನ್ನು ವಹಿಸಲಾಗಿತ್ತು. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಅಂಬೇಡ್ಕರ್‌ರವರು ಮಾಡಿದ ಸಾಧನೆ ಬಹುತೇಕ ಜನರಿಗೆ ಗೊತ್ತಿಲ್ಲ!

ಅಥವಾ ಗೊತ್ತಾಗಲು ಬಿಟ್ಟಿಲ್ಲ. ಕುತೂಹಲಕಾರಿ ವಿಷಯವೆಂದರೆ ಈ ಅವಧಿಯಲ್ಲಿಯೇ ಅವರು ಪ್ರಸಿದ್ಧ ದಾಮೋದರ್ ಕಣಿವೆ ಯೋಜನೆ, ಹಿರಾ ಕುಡ್ ಯೋಜನೆ ಮತ್ತು ಸೋನ್ ಕಣಿವೆ ಯೋಜನೆ ಜಾರಿಗೊಳಿಸಿದ್ದು ಮತ್ತು ಇಂತಹ ಬೃಹತ್ ನೀರಾವರಿ ಯೋಜನೆ, ವಿದ್ಯುತ್ ಯೋಜನೆಗಳನ್ನು ಗಮನ ದಲ್ಲಿಟ್ಟುಕೊಂಡು ಅವರು 1944ರಲ್ಲೆ ‘ಕೇಂದ್ರೀಯ ಜಲವಿದ್ಯುತ್ ಮತ್ತು ನೀರಾವರಿ ಆಯೋಗ’ವನ್ನು ಸ್ಥಾಪಿಸಿದ್ದು.

ಇವತ್ತು ನಮ್ಮ ಮನೆಗಳೇನಾದರೂ ಬೆಳಗುತ್ತಿದ್ದರೆ, ನಮ್ಮ ಹೊಲಗಳೇನಾದರೂ ಹಸುರಿನಿಂದ ಕಂಗೊಳಿಸುತ್ತಿದ್ದರೆ ಅದು ನೀರಾವರಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅಂಬೇಡ್ಕರ್ ಮಾಡಿದ ಅದ್ಭುತ ಸಾಧನೆಯ ಫಲವಲ್ಲದೆ ಬೇರೇನೂ ಅಲ್ಲ. ದುರಂತ ವೆಂದರೆ ಇಂತಹ ಅದ್ಭುತ ಸಾಧನೆಯನ್ನು ಮುಚ್ಚಿಡಲಾಗಿದೆಯಲ್ಲ ಎಂಬುದು.

ಅಂಬೇಡ್ಕರ್‌ರ ಮತ್ತೊಂದು ಸಾಧನೆಯನ್ನು ಹೇಳಲೇಬೇಕು. ಅದು ಭಾರತೀಯ ರಿಸರ್ವ್ (ಆರ್‌ಬಿಐ)ಗೆ ಸಂಬಂಧಿಸಿದ್ದು. ತಮ್ಮ ‘ಆರ್ಥಿಕ ಯೋಜನೆ, ನೀರಾವರಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅಂಬೇಡ್ಕರ್ ಪಾತ್ರ’ ಎಂಬ ಕೃತಿಯಲ್ಲಿ ಖ್ಯಾತ ಚಿಂತಕ ಸುಖದೇವ್ ಥೊರಟ್‌ರವರು ಇದನ್ನು ದಾಖಲಿಸುತ್ತಾರೆ. ”ಆರ್‌ಬಿಐ ಸ್ಥಾಪನೆಗೆ ಬ್ರಿಟಿಷ್ ಮಹಾರಾಣಿಯವರಿಂದ ನೇಮಿಸಲ್ಪಟ್ಟಿದ್ದ ‘ಹಿಲ್ಟನ್ ಯಂಗ್ ಆಯೋಗ’ದ ಮುಂದೆ ಅಂಬೇಡ್ಕರ್ ರವರು ಆರ್‌ಬಿಐನ ಮಾರ್ಗದರ್ಶಿ ಸೂತ್ರ, ಕಾರ್ಯಶೈಲಿ ಮತ್ತು ದೂರದೃಷ್ಟಿಯನ್ನು ಮಂಡಿಸುತ್ತಾರೆ.

ತನ್ಮೂಲಕ ಆರ್.ಬಿ.ಐ.ನ ಸ್ಥಾಪನೆಗೆ ಕಾರಣರಾಗುತ್ತಾರೆ’ ಎನ್ನುತ್ತಾರೆ ಸುಖದೇವ್ ಥೊರಟ್. ಕುತೂಹಲಕಾರಿ ಅಂಶವೆಂದರೆ ‘ಹಿಲ್ಟನ್ ಯಂಗ್’ ಆಯೋಗದ ಪ್ರತಿಯೊಬ್ಬ ಸದಸ್ಯನ ಕೈಯಲ್ಲೂ ಅಂಬೇಡ್ಕರ್ ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ಗಾಗಿ ‘ಡಿ.ಎಸ್‌ಸಿ’ ಪದವಿ ಪಡೆಯಲು ರಚಿಸಿದ್ದ ‘ರೂಪಾಯಿಯ ಸಮಸ್ಯೆ, ಅದರ ಮೂಲ ಮತ್ತು ಪರಿಹಾರ’ ಎಂಬ ಕೃತಿಯಿತ್ತು.

ದೇಶದ ಹಣಕಾಸು ವ್ಯವಸ್ಥೆ ಪಟ್ಟಭದ್ರರ ಕೈಗೆ ಜಾರುತ್ತಿದ್ದುದನ್ನು ಗಮನಿಸಿ ಅಂಬೇಡ್ಕರ್‌ರು ಆರ್.ಬಿ.ಐ.ನ ಅಗತ್ಯತೆ ಮತ್ತು ಅದರ ಭವಿಷ್ಯದ ಮಾರ್ಗಸೂಚಿಯ ಬಗ್ಗೆ ಆಯೋಗದ ಮುಂದೆ ಸಮಗ್ರವಾದ ವಾದ ಮಂಡಿಸುತ್ತಾರೆ. ತನ್ಮೂಲಕ 1934ರಲ್ಲಿ ಅದರ ಸ್ಥಾಪನೆಗೆ ಕಾರಣರಾಗುತ್ತಾರೆ. ಮತ್ತೆ ಕೇಳು ತ್ತಿರುವ ಪ್ರಶ್ನೆಯೇನೆಂದರೆ ಇಂತಹ ಅದ್ಭುತ ಇತಿಹಾಸ ಎಷ್ಟು ಜನರಿಗೆ ಗೊತ್ತು ಎಂಬುದು?

ಮತ್ತೊಂದು ವಿಷಯ ಇಲ್ಲಿ ಹೇಳಲೇಬೇಕಾಗಿದೆ. ಇತ್ತೀಚೆಗೆ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ತನ್ನ 150ನೆ ವರ್ಷಾಚರಣೆಯನ್ನು ನೆರವೇರಿಸಿಕೊಂಡಿತು. ಅದು ರಾಷ್ಟ್ರಗೀತೆಯ ಕರ್ತೃ ರವೀಂದ್ರನಾಥ್ ಠಾಗೋರ್‌ರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಎಂದು ಬಿಂಬಿಸಿತು. ಪ್ರಶ್ನೆಯೇನೆಂದರೆ ಈ ದೇಶದ ಕರೆನ್ಸಿಯ ಬಗ್ಗೆ ಹಣಕಾಸು, ಅರ್ಥಶಾಸ್ತ್ರದ ಬಗ್ಗೆ ಠಾಗೋರ್‌ರ ಕೊಡುಗೆಯಾದರೂ ಏನು? ಎಂಬುದು.

ಖಂಡಿತ ಏನೂ ಇಲ್ಲ. ಎಸ್.ಬಿ.ಐ. ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಕಾರಣಕರ್ತರಾದ, ಹಲವಾರು ಕೃತಿಗಳನ್ನು ರಚಿಸಿ ಈ ದೇಶದ ಆರ್ಥಿಕತೆ ಮತ್ತು ಹಣಕಾಸು ಕ್ಷೇತ್ರಕ್ಕೆ ಅದ್ಭುತ ಕೊಡುಗೆ ನೀಡಿರುವ, ನೊಬೆಲ್ ಪ್ರಶಸ್ತಿ ವಿಜೇತ ಖ್ಯಾತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್‌ರಿಂದ ‘ಅಂಬೇಡ್ಕರ್ ನನ್ನ ಅರ್ಥಶಾಸ್ತ್ರದ ಗುರು’ ಎಂದು ಕರೆಸಿಕೊಂಡಿರುವ ಬಾಬಾಸಾಹೇಬ್ ಡಾ. ಅಂಬೇಡ್ಕರ್‌ರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಎಂದು ಬಿಂಬಿಸಬೇಕಿತ್ತು!

ದುರಂತ ವೆಂದರೆ ಅಸ್ಪಶತೆಯ ಸೋಂಕು ತಗುಲಿಸಿಕೊಂಡ ಈ ದೇಶದ ಸ್ಥಾಪಿತ ಹಿಸಾಕ್ತಿಗಳಿಗೆ ಅಂಬೇಡ್ಕರ್‌ರ ಈ ಸಾಧನೆಗಳು ಕಾಣುತ್ತಿಲ್ಲ. ಇನ್ನು ಅವರು ಬ್ರಾಂಡ್ ಅಂಬಾಸಿಡರ್ ಆಗಲು ಹೇಗೆ ಸಾಧ್ಯ? ಅವರನ್ನು ಕೇವಲ ಒಂದು ಸಮುದಾಯದ ‘ಬ್ರಾಂಡ್’ ಆಗಿ ಬಿಂಬಿಸಲಾಗುತ್ತಿದೆ ಅಷ್ಟೆ!

ಇನ್ನು ಈ ನಡುವೆ ಅಂತರಾಜ್ಯ ಸಮಸ್ಯೆ ಗಳ ಬಗ್ಗೆ ಅಂಬೇಡ್ಕರ್‌ರ ಅನಿಸಿಕೆಗಳನ್ನು ದಾಖಲಿಸಲೇಬೇಕು. ಯಾಕೆಂದರೆ 1955ರಲ್ಲೇ ಅಂಬೇಡ್ಕರ್ ತಮ್ಮ ‘ಭಾಷಾವಾರು ಪ್ರಾಂತ್ಯ ಗಳ ಬಗೆಗಿನ ಆಲೋಚನೆಗಳು’ ಎಂಬ ಕೃತಿಯಲ್ಲಿ ಮಧ್ಯಪ್ರದೇಶವನ್ನು ಉತ್ತರ ಮತ್ತು ದಕ್ಷಿಣ ರಾಜ್ಯಗಳಾಗಿ ವಿಂಗಡಿಸಲು ಮತ್ತು ಬಿಹಾರವನ್ನು ಎರಡು ರಾಜ್ಯವಾಗಿ ವಿಂಗಡಿಸಲು ಸಲಹೆ ನೀಡು ತ್ತಾರೆ.

ಅಚ್ಚರಿಯ ವಿಷಯವೇನೆಂದರೆ ಅವರು ಸಲಹೆ ನೀಡಿದ 45 ವರ್ಷಗಳ ನಂತರ ಅದು ಜಾರಿಯಾ ದದ್ದು. ಯಾಕೆಂದರೆ 2000ದಲ್ಲಿ ಮಧ್ಯಪ್ರದೇಶದಿಂದ ಛತ್ತೀಸ್‌ಗಢ ಮತ್ತು ಬಿಹಾರದಿಂದ ಜಾರ್ಖಂಡ್ ಅನ್ನು ವಿಭಜನೆಗೊಳಿಸಿ ಪ್ರತ್ಯೇಕ ರಾಜ್ಯಗಳೆಂದು ಘೋಷಿಸಲಾಯಿತು. ತನ್ಮೂಲಕ ಅಂಬೇಡ್ಕರ್‌ರ ದೂರದೃಷ್ಟಿಗೆ ಮನ್ನಣೆ ನೀಡಲಾಯಿತು. (ಅಂದಹಾಗೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಇರುವ ಹೊಗೇನಕಲ್ ವಿವಾದಕ್ಕೆ ಅಂಬೇಡ್ಕರ್‌ರಲ್ಲಿ ಪರಿಹಾರವಿದೆಯೆಂದರೆ ಅತಿಶಯೋಕ್ತಿಯೆನಿಸದು. ಅದಕ್ಕಾಗಿ ಅಂಬೇಡ್ಕರ್ ಕೃತಿಗಳ ಮೊರೆ ಹೋಗಬೇಕಷ್ಟೆ.)

ಅಂಬೇಡ್ಕರ್‌ರನ್ನು ಮುಚ್ಚಿಡುವ, ಅವರ ಸಾಧನೆಗಳೆಲ್ಲವನ್ನು ಇಡೀ ಜಗತ್ತಿಗೆ ಹೇಳದಿರುವುದರ ಹಿಂದಿರುವ ಹುನ್ನಾರವಾದರೂ ಏನು? ಖಂಡಿತ ಒಂದು ಬೃಹತ್ ಸಮುದಾಯವನ್ನು, ಅದರ ಭವ್ಯ ಇತಿಹಾಸವನ್ನು ಅದರಿಂದ ಮರೆಮಾಚಿ ಮಾನಸಿಕ ಗುಲಾಮಗಿರಿಗೆ ತಳ್ಳುವ ವ್ಯವಸ್ಥಿತ ಸಂಚಿದು. ಈ ನಿಟ್ಟಿನಲ್ಲಿ ಶೋಷಿತ ಸಮುದಾಯ ಅಂತಹ ವ್ಯವಸ್ಥಿತ ಸಂಚಿಗೆ ಬಲಿಯಾಗಬಾರದು.

‘ನಮಗೇಕೆ ಇದನ್ನು ಹೇಳಲಿಲ್ಲ’ ಎಂದು ಮುಂದಿನ ಪೀಳಿಗೆ ಕೇಳುವಂತಾಗಬಾರದು. ಆದಕಾರಣ ಶೋಷಿತ ಸಮುದಾಯ ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ. ಅಂಬೇಡ್ಕರ್‌ರ ಭವ್ಯ ಇತಿಹಾಸವನ್ನು, ಪ್ರತಿಯೊಂದು ಸಾಧನೆಯನ್ನು ಇಡೀ ಜಗತ್ತಿಗೆ ಸಾರಿ ಹೇಳಲು ಟೊಂಕಕಟ್ಟಿ ನಿಲ್ಲಬೇಕಿದೆ.

-ರಘೋತ್ತಮ ಹೂ.ಬ. ಚಾಮರಾಜನಗರ, Ph: 09481189116

ಮತಾಂತರಗೊಂಡ ದಲಿತರಿಗೂ ಮೀಸಲಾತಿ; ಕೇಂದ್ರಕ್ಕೆ ನೊಟೀಸ್


ಕ್ರಿಶ್ಚಿಯನ್, ಇಸ್ಲಾಮ್, ಪಾರ್ಸಿ ಮತ್ತು ಜೈನ ಧರ್ಮಗಳಿಗೆ ಮತಾಂತರಗೊಂಡ ದಲಿತರಿಗೂ ಮೀಸಲಾತಿ ನೀಡಬೇಕೆಂಬ ರಂಗನಾಥ ಮಿಶ್ರಾ ಆಯೋಗದ ಶಿಫಾರಸಿನ ಸಂಬಂಧ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದು ದಾಖಲಾಗಿದ್ದು, ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ನೊಟೀಸ್ ಜಾರಿ ಮಾಡಿದೆ.

ಮತಾಂತರಗೊಂಡ ದಲಿತರಿಗೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿರುವ ಅಖಿಲ ಭಾರತ ಕ್ರಿಶ್ಚಿಯನ್ ಫೆಡರೇಷನ್ ಎಂಬ ಸಂಸ್ಥೆಯು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದು, ಸರಕಾರದ ನಡೆಯೇನು ಎಂಬುದನ್ನು ಸುಪ್ರೀಂ ಕೋರ್ಟ್ ಇದೀಗ ಪ್ರಶ್ನಿಸಿದೆ.

ಸುಪ್ರೀಮ್ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ನೇತೃತ್ವದ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗವು ಅಲ್ಪಸಂಖ್ಯಾತರ ಮೀಸಲಾತಿ ಕುರಿತು ನೀಡಿರುವ ವರದಿಯನ್ನು ಲೋಕಸಭೆಯಲ್ಲಿ ಖುರ್ಷೀದ್ ಇತ್ತೀಚೆಗಷ್ಟೇ ಮಂಡಿಸಿದ್ದರು.

ಅದರ ಪ್ರಕಾರ ಸರಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಬೇಕು, ಅಲ್ಲದೆ ಮತಾಂತರಗೊಂಡ ದಲಿತರಿಗೂ ಮೀಸಲಾತಿಯನ್ನು ವಿಸ್ತರಿಸಬೇಕು ಎಂದು ಶಿಫಾರಸು ಮಾಡಲಾಗಿತ್ತು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಬಿಜೆಪಿ, ಶಿವಸೇನೆ ಮತ್ತಿತರ ಪಕ್ಷಗಳು ಹಾಗೂ ವಿಶ್ವ ಹಿಂದೂ ಪರಿಷತ್‌ಗಳು, ಪ್ರಸ್ತಾವಿತ ಮೀಸಲಾತಿ ಜಾರಿಗೊಂಡಲ್ಲಿ ಮತಾಂತರಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದಿದ್ದವು.

ಈ ಸಂಬಂಧ ಪ್ರಕರಣದ ವಿಚಾರಣೆಯನ್ನು ಬುಧವಾರ ಕೈಗೆತ್ತಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮತ್ತು ಬಿ.ಎಸ್. ಚೌಹಾನ್ ಅವರನ್ನೊಳಗೊಂಡ ಪೀಠವು, ರಂಗನಾಥ್ ಮಿಶ್ರಾ ಆಯೋಗದ ವರದಿಯನ್ನು ಜಾರಿಗೊಳಿಸುವ ಸಂಬಂಧ ಪ್ರತಿಕ್ರಿಯಿಸುವಂತೆ ಸಾಮಾಜಿಕ ನ್ಯಾಯ ಮತ್ತು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯಕ್ಕೆ ನೊಟೀಸ್ ಜಾರಿ ಮಾಡಿದೆ.

ಮತಾಂತರ ಪ್ರಕರಣಗಳನ್ನು ಕಡಿಮೆ ಮಾಡುವ ಪ್ರಯತ್ನ ಮಾಡಲಾಗುತ್ತದೆ ಎಂದು ಪ್ರಕಟಿಸಿದ್ದ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಮತ್ತು ಆಯೋಗದ ಶಿಫಾರಸಿನಲ್ಲಿ ವ್ಯತ್ಯಾಸಗಳಿರುವುದರಿಂದ ರಂಗನಾಥ್ ಆಯೋಗದ ವರದಿ ಜಾರಿಯಾಗುವುದು ಕಷ್ಟ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷೀದ್ ಇತ್ತೀಚೆಗೆ ನೀಡಿದ್ದ ಹೇಳಿಕೆಯನ್ನೂ ಹಿರಿಯ ವಕೀಲರುಗಳಾದ ಕೆ.ಕೆ. ವೇಣುಗೋಪಾಲ್ ಮತ್ತು ಡಿ. ವಿದ್ಯಾನಂದಮ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಕಾಂಗ್ರೆಸ್, ಬಿಜೆಪಿ ಅಂಬೇಡ್ಕರ್ ವಿರೋಧಿಗಳು: ಮಾಯಾವತಿ


ಕಾಂಗ್ರೆಸ್, ಬಿಜೆಪಿ ಅಂಬೇಡ್ಕರ್ ವಿರೋಧಿಗಳು: ಮಾಯಾವತಿ  
ಲಕ್ನೋ, ಶನಿವಾರ, 27 ಮಾರ್ಚ್ 2010( 20:32 IST )

<!–

–>ಕಾಂಗ್ರೆಸ್, ಭಾರತೀಯ ಜನತಾ ಪಕ್ಷ ಹಾಗೂ ಸಮಾಜವಾದಿ ಪಕ್ಷಗಳು ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ವಿರೋಧಿಗಳಾಗಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಶನಿವಾರ ಗಂಭೀರವಾಗಿ ಆರೋಪಿಸಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಜಾರಿ ನಿರ್ಧಾರ ಕುರಿತಂತೆ ಮತ್ತೆ ವಾಗ್ದಾಳಿ ನಡೆಸಿರುವ ಅವರು, ಮಹಿಳಾ ಮೀಸಲಾತಿ ಮಸೂದೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಹಾಗೂ ಮೇಲ್ವರ್ಗದ ಬಡ ಮಹಿಳೆಯರಿಗೆ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದು ಆರೋಪಿಸಿದ್ದಾರೆ.

ಬಿಎಸ್ಪಿ ಪಕ್ಷದ ಸಭೆಯಲ್ಲಿ ಮಾತನಾಡಿದ ಮಾಯಾವತಿ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನೀತಿ ಮತ್ತು ನಡವಳಿಕೆಗಳನ್ನು ಗಮನಿಸಿದರೆ ಇವರೆಲ್ಲಾ ಯಾವಾಗಲೂ ಅಂಬೇಡ್ಕರ್ ವಿರೋಧಿಗಳಂತೆ ವರ್ತಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ ಎಂದರು.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಗೌರವಾರ್ಥವಾಗಿ ಬೃಹತ್ ಸೌಧ, ಪಾರ್ಕ್, ಯೂನಿರ್ವಸಿಟಿಗಳನ್ನು ನಿರ್ಮಿಸಲು ಮುಂದಾದ ಸಂದರ್ಭದಲ್ಲಿಯೇ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇನ್ನುಳಿದ ವಿರೋಧ ಪಕ್ಷಗಳು ಅನಾವಶ್ಯಕ ವಿವಾದ ಹುಟ್ಟುಹಾಕಲು ಪ್ರಾರಂಭಿಸಿರುವುದಾಗಿ ಹೇಳಿದರು.