Posts Tagged ‘ಜಾತಿ’

ಜಾತಿ-ವಿರೋಧ


ಬುಧವಾರ – ಜೂನ್ -16-2010

ನಾ­ನೆಂದೂ ಬ್ರಾಹ್ಮಣ ವಿರೋಧಿಯಾಗಿಲ್ಲ. ಆದರೆ ಯಾವತ್ತೂ ಜಾತಿ ವಿರೋಧಿಯಾಗಿದ್ದೇನೆ. ದಕ್ಷಿಣದ ಬ್ರಾಹ್ಮಣ ವಿರೋಧ, ಜಾತಿ ವಿರೋಧವಾಗಿ ಪರಿವರ್ತಿತವಾಗಬೇಕೆಂದು ಯೋಚಿಸುವಲ್ಲಿ ನಾನೊಂದು ತಪ್ಪು ಮಾಡಿದೆ. ರೆಡ್ಡಿ, ಮೊದಲಿಯಾರ್ ಹಾಗೂ ನಾಯರ್‌ರೊಳಗಿನ ಆಳುವ ಶಕ್ತಿಗಳು, ಕಳೆದ 50 ವರ್ಷಗಳಲ್ಲಿ ಬ್ರಾಹ್ಮಣರ ಮಟ್ಟಕ್ಕೆ ಬರಲೆಂದೇ ಬ್ರಾಹ್ಮಣ ವಿರೋಧಿಯಾಗಿದ್ದವು. ಈಗ ಅವರ ಮಟ್ಟಕ್ಕೆ-ಕನಿಷ್ಠ ಪಕ್ಷ ರಾಜಕೀಯದ ದೃಷ್ಟಿಯಿಂದ- ಬಂದ ಮೇಲೆ ಅವು ಸಂತೃಪ್ತವಾದಂತಿವೆ. ಇವರು ಮೀಸಲಾತಿಯ ಸಿದ್ಧಾಂತವನ್ನು ಕೈ ಬಿಟ್ಟಿದ್ದಾರೆ. ಒಂದು ಕಾಲಕ್ಕೆ ಬ್ರಾಹ್ಮಣರು ಮಾಡುತ್ತಿದ್ದಂತೆಯೇ ಅವರೂ ಕೂಡ ಈಗ ತಥಾಕಥಿತ ಜಾತಿಯ ಸರಕಾರ ವ್ಯವಸ್ಥೆಗೆ ವಿರೋಧಿಗಳಾಗಿದ್ದಾರೆ. ಜಾತಿಯ ವಿರುದ್ಧದ ಹೋರಾಟದಲ್ಲಿ, ದಕ್ಷಿಣ ಭಾರತ ಇಡೀ ಭಾರತಕ್ಕೆ ಮುಂದಾಳುತನ ವಹಿಸಬಲ್ಲದೆನ್ನುವ ನನ್ನ ಆಸೆಗೆ ಸದ್ಯಕ್ಕಂತೂ ಗ್ರಹಣ ಹಿಡಿದಿದೆ. ಕಾಪು, ಇಳವ, ಮಾಳಮಾದಿಗ, ಅನ್ನಾರ, ಆದಿವಾಸಿ, ಕ್ರಿಶ್ಚಿಯನ್ನರು ಹಾಗೂ ಇಂಥ ಮತ್ತಿತರರು, ಹಾಲಿ, ಸ್ತ್ರೀಯರೂ ಸಹ ಮೇಲೆದ್ದು ಚುನಾವಣೆಯಲ್ಲಿ ಪರಿಣಾಮಕಾರಿಯಾಗದ ಹೊರತು ಆಸೆಯೇ ಅಂಕುರಿಸಲಾರದು. ರೆಡ್ಡಿ, ನಾಯರ್, ಮೊದಲಿಯಾರರು ಹಿಂದುಳಿದ ಜಾತಿಯವರಲ್ಲವೇ ಅಲ್ಲ. ಅವರೆಂದೂ ಹಿಂದುಳಿದಿಲ್ಲ. ಧರ್ಮ ಎಂದೂ ತಮಗೆ ಪ್ರತಿಷ್ಠಿತ ಸ್ಥಾನ ನೀಡಲಿಲ್ಲವೆನ್ನುವ ಒಂದೇ ವ್ಯತ್ಯಾಸದೊಂದಿಗೆ ಇವರು, ಕ್ಷತ್ರಿಯರು, ವೈಶ್ಯರು ಹಾಗೂ ಕಾಯಸ್ಥರಂತೇ ಇದ್ದಾರೆ. ಅವಕಾಶದಿಂದ ಅರ್ಹತೆ ಹೊರಹೊಮ್ಮುತ್ತದೆನ್ನುವ ಹೊಸ ಸಿದ್ಧಾಂತವನ್ನು ಅಂಗೀಕರಿಸಲೇಬೇಕು. ಭಾರತದ ಜನಸಂಖ್ಯೆಯ ಶೇ.90ರಷ್ಟಾಗಿರುವ ಶೂದ್ರ, ಹರಿಜನ, ಮತೀಯ ಅಲ್ಪಸಂಖ್ಯಾತರೊಳಗಿನ ಹಿಂದುಳಿದ ಜಾತಿಗಳು, ಆದಿವಾಸಿಗಳು ಹಾಗೂ ಎಲ್ಲ ಸ್ತ್ರೀಯರಿಗೆ ದೇಶದ ಎಲ್ಲ ಉನ್ನತ ಅವಕಾಶಗಳ ಶೇ.60ರಷ್ಟನ್ನು ನೀಡಲೇಬೇಕು. ಅತ್ಯುನ್ನತ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ತತ್ತ್ವ ಅನ್ವಯವಾಗುತ್ತದೆ. ಈ ವಿಷಯದಲ್ಲಿ ಪ್ರಧಾನಿಯವರ ವಾದಗಳನ್ನು -ಆ ವಾದಗಳು ಕಪಟ ರೀತಿಯಲ್ಲಿ ಅರ್ಹತೆ, ಸಾಮರ್ಥ್ಯವನ್ನು ಆಧರಿಸಿವೆ-ಸಂಪೂರ್ಣವಾಗಿ ಅಲ್ಲಗಳೆಯುತ್ತೇನೆ. ದಿಲ್ಲಿಯ ಬಹುತೇಕ ಎಲ್ಲ ಆಡಳಿತಾಧಿಕಾರಿಗಳು, ಲೋಕಸಭೆಯ ಕಾರ್ಯದರ್ಶಿ, ಅಮೆರಿಕೆಯಲ್ಲಿನ ಭಾರತೀಯ ರಾಯಭಾರಿ ಇವರೆಲ್ಲ ಕಾಶ್ಮೀರಿ ಪಂಡಿತರೆ (ವರ್ಷ ಅಥವಾ ಎರಡು ವರ್ಷಗಳಲ್ಲಿ ಪ್ರಧಾನ ದಂಡನಾಯಕ ಕೂಡ ಕಾಶ್ಮೀರಿ ಪಂಡಿತನೇ ಆಗಬಹುದು)-ಹೀಗೇಕೆ ಎನ್ನುವ ಪ್ರಶ್ನೆ ಕೇಳಬೇಕಾಗಿದೆ. ಇದನ್ನು ಪ್ರಧಾನಿಯ ವಿರುದ್ಧ ವೈಯಕ್ತಿಕ ದ್ವೇಷದವೆಂದು ಬಗೆಯಬಾರದು. ಯಾಕೆಂದರೆ ಸದ್ಯದ ಉತ್ತರ ಪ್ರದೇಶದ ಮುಖ್ಯಮಂತ್ರಿ; ಬಹುತೇಕ ಎಲ್ಲ ಉನ್ನತ ಸ್ಥಾನಗಳಿಗೆ ತನ್ನ ಜಾತಿಯವರನ್ನೇ ನೇಮಕ ಮಾಡಿದ್ದಾರೆ; ಹಿಂದೆ ಕಾಯಸ್ಥ ಮುಖ್ಯಮಂತ್ರಿ ಮಾಡಿದಂತೆ. ಒಬ್ಬ ವ್ಯಕ್ತಿ ತನ್ನೆಡೆಗೆ ತನ್ನ ಜಾತಿಯವರನ್ನೇ ಸೇರಿಸಿಕೊಳ್ಳುತ್ತಿರುವ ನಿಯಮವೊಂದು ನಮ್ಮ ದೇಶದಲ್ಲಿ ಪ್ರಚಲಿತವಾಗುತ್ತಿದೆ. ಯಾಕೆಂದರೆ ಅವರ ಭವಿಷ್ಯ ವೈಯಕ್ತಿಕವಾಗಿ ಪರಸ್ಪರರನ್ನೇ ಅವಲಂಬಿಸಿದಂತಿದೆ. ಈ ದೇಶವನ್ನು ಹೊಲಸುಗೆಡಿಸುತ್ತಿರುವ ಅಪಾಯಕಾರಿ ಜಾಲವನ್ನು ಕಿತ್ತೆಸೆಯಲು ಸುಯೋಜಿತ ಪ್ರಯತ್ನ ನಡೆಯಲೇಬೇಕು. ಜಾತಿಯ ಬಗ್ಗೆ ಮಾತಾಡಕೂಡದೆನ್ನುವುದರ ಅರ್ಥ ಭಾರತೀಯ ಸಂದರ್ಭದ ಏಕೈಕ ಮಹತ್ವದ ಸತ್ಯವನ್ನು ನೋಡದೆ ಕಣ್ಣು ಮುಚ್ಚುವುದೆಂದಾಯಿತು. ಬರಿ ಜಾತಿ ಹೊರಟು ಹೋಗಲೆಂದರೆ ಅದು ಹೊರಟು ಹೋಗುವುದಿಲ್ಲ. 5000 ವರ್ಷ ಹಳೆಯದಾಗಿರುವ ಸಾಮರ್ಥ್ಯಗಳ ಆಯ್ಕೆ ನಡೆದೇ ಇದೆ. ನಿರ್ದಿಷ್ಟ ಜಾತಿಗಳು ವಿಶೇಷ ಪ್ರತಿಭೆ ಪಡೆದಿವೆ. ಉದಾಹರಣೆಗೆ ಉದ್ದಿಮೆ ಹಾಗೂ ಹಣಕಾಸಿನ ವಿಷಯದಲ್ಲಿ ಮಾರವಾಡಿ, ಬನಿಯಾ ಮೇಲುಗೈ ಸಾಧಿಸಿದರೆ, ಸಾರಸ್ವತ ಬ್ರಾಹ್ಮಣ ಬೌದ್ಧಿಕ ಕ್ಷೇತ್ರದಲ್ಲಿ; ಇತರರಿಗೆ ಆದ್ಯತೆಯ ಅವಕಾಶ ಹಾಗೂ ವಿಶೇಷಾಧಿಕಾರ ನೀಡದ ಹೊರತು ಈ ಜಾತಿಗಳೊಂದಿಗೆ ಸ್ಪರ್ಧಿಸುವ ಮಾತು ಅಸಂಗತವಾಗುತ್ತದೆ. ಸಾಮರ್ಥ್ಯಗಳ ಸಂಕುಚಿತ ಆಯ್ಕೆಯನ್ನು ಒಟ್ಟಾರೆ ವಿಸ್ತಾರ ಗೊಳಿಸಬೇಕು. ಅದನ್ನು ಮಾಡಬೇಕಿದ್ದರೆ ಎರಡು-ಮೂರು ದಶಕಗಳವರೆಗೆ, ಹಿಂದುಳಿದ ಜಾತಿ ಹಾಗೂ ಸಮೂಹಗಳಿಗೆ ಆದ್ಯತೆಯ ಅವಕಾಶಗಳನ್ನು ಕಲ್ಪಿಸಿಕೊಡ ಬೇಕಾಗುತ್ತದೆ. ಉದ್ಯೋಗ ಹಾಗೂ ಶಿಕ್ಷಣದ ಅವಕಾಶಗಳ ಭೇದವಿದೆಯೆನ್ನುವುದನ್ನು ತೋರಿಸಬೇಕಾಗಿದೆ. ಯಾವುದೇ ವ್ಯಕ್ತಿಗೆ ಆತನ ಜಾತಿಯ ಕಾರಣದಿಂದಾಗಿ ಶೈಕ್ಷಣಿಕ ಸಂಸ್ಥೆಯ ಬಾಗಿಲನ್ನು ಮುಚ್ಚಕೂಡದು. ಸಮಾಜ ಇಲ್ಲಿಯವರೆಗೆ ವಿಶೇಷ ಅಧಿಕಾರ ನೀಡಿರುವವರಿಗೆ ಉದ್ಯೋಗದಿಂದ ದೂರವಿಟ್ಟರೆ ಅದು ನ್ಯಾಯವಾಗಿ ನಡೆದುಕೊಂಡಂತಾಗುತ್ತದೆ. ಬೇರೆಡೆಯಲ್ಲಿ ಅವರು ತಮ್ಮ ಜೀವನೋಪಾಯ ಕಂಡುಕೊಳ್ಳಲು ಅವರಿಗೆ ಅವಶ್ಯವಿರುವ ಶೈಕ್ಷಣಿಕ ಸಾಮರ್ಥ್ಯ ನೀಡುವುದಷ್ಟೇ ಸಮಾಜ ಮಾಡಬೇಕಾದದ್ದು.

-ಡಾ. ರಾಮಮನೋಹರ ಲೋಹಿಯಾ

curtys: Varthabharathi

http://beta.varthabharathi.net/Writer/12710/

ಜಾತಿ ಜನಗಣತಿ ಒಡೆಯುವುದಿಲ್ಲ, ದೇಶವನ್ನು ಒಂದಾಗಿಸುತ್ತದೆ


VB’s Editorial

ಜಾತಿ ಜನಗಣತಿ ಒಡೆಯುವುದಿಲ್ಲ, ದೇಶವನ್ನು ಒಂದಾಗಿಸುತ್ತದೆ

ಬುಧವಾರ – ಜೂನ್ -16-2010

ಜಾತಿ ಜನಗಣತಿಯಿಂದ ಒಡೆದು ಆಳುವ ನೀತಿಯನ್ನು ಎತ್ತಿ ಹಿಡಿದಂತಾಗುತ್ತದೆಯೇ? ಕೆಲವು ಸ್ಥಾಪಿತ ಹಿತಾಸಕ್ತಿಗಳು ಪದೇ ಪದೇ ಇಂತಹದೊಂದು ಅಭಿಪ್ರಾಯವನ್ನು ತೇಲಿ ಬಿಟ್ಟು, ಜಾತಿ ಜನಗಣತಿಯ ಚರ್ಚೆಯನ್ನು, ಅನಿವಾರ್ಯತೆಯನ್ನು ದಾರಿತಪ್ಪಿಸುವ ಪ್ರಯತ್ನ ನಡೆಸುತ್ತಿವೆ. ಜಾತಿ ಜನಗಣತಿಯಿಂದ ದೇಶದ ಅಖಂಡತೆಗೆ ಧಕ್ಕೆಯಿದೆಯೆನ್ನುವಂತಹ ಅಭಿಪ್ರಾಯ ಬರುವ ಮಾತುಗಳನ್ನು ಸ್ವತಃ ಕಾಂಗ್ರೆಸ್‌ನೊಳಗಿನ ನಾಯಕರೂ ವ್ಯಕ್ತಪಡಿಸಿದ್ದರು. ಹೌದೆ? ಜಾತಿ ಜನಗಣತಿಯೆಂದರೆ ಒಡೆದು ಆಳುವ ನೀತಿಯ ಮರು ಅನುಷ್ಠಾನವೆ?

ಇಷ್ಟಕ್ಕೂ ಈ ದೇಶದಲ್ಲಿ ಒಡೆದು ಆಳುವ ನೀತಿಯನ್ನು ಅನುಷ್ಠಾನಕ್ಕೆ ತಂದವರು ಯಾರು? ಬ್ರಿಟಿಷರೆ? ಇದು ಮೊತ್ತ ಮೊದಲು ಚರ್ಚೆಯಾಗಬೇಕಾದ ವಿಷಯ. ಬ್ರಿಟಿಷರು ಈ ದೇಶದ ಹಿಂದೂ ಮತ್ತು ಮುಸ್ಲಿಮರ ನಡುವೆ ಒಡೆದು ಆಳುವ ನೀತಿಯನ್ನು ಜಾರಿಗೆ ತಂದರು. ದೇಶದ ಸೇನೆಯನ್ನು ಒಡೆದರು. ಸ್ವಾತಂತ್ರ ಹೋರಾಟಗಾರರನ್ನು ಒಡೆದರು. ಜನರನ್ನು ಒಡೆದರು. ಬಂಗಾಳವನ್ನೇ ಒಡೆದರು. ಆದರೆ ಮುಂದೆ, ಬ್ರಿಟಿಷರ ಈ ಒಡೆದು ಆಳುವ ನೀತಿಯ ವಿರುದ್ಧವೇ ಒಂದು ದೊಡ್ಡ ಚಳವಳಿ ನಡೆಯಿತು.ಅದು ಬೇರೆ ವಿಷಯ.

ಆದರೆ, ಒಡೆದು ಆಳುವ ನೀತಿಯನ್ನು ಜಾರಿಗೆ ತರಲು ಬ್ರಿಟಿಷರಿಗೆ ಮಾರ್ಗದರ್ಶಿಯಾದವರು ಯಾರು? ಒಡೆದು ಆಳುವ ನೀತಿಯನ್ನು ಅವರು ಯಾರಿಂದ ಕಲಿತರು?
ಈ ದೇಶಕ್ಕೆ ಬ್ರಿಟಿಷರು, ಮೊಗಲರು ಕಾಲಿಡುವ ಮೊದಲೇ ಅಂದರೆ ಶತಶತಮಾನಗಳ ಹಿಂದೆಯೇ ಇಲ್ಲಿ ಒಡೆದು ಆಳುವ ನೀತಿ ಜಾರಿಯಲ್ಲಿತ್ತು. ಪಂಚಮರು ಅಂದರೆ ದಲಿತರು ಊರಿಗೆ ಕಾಲಿಡಬಾರದು, ಸಾರ್ವಜನಿಕ ನೀರನ್ನು ಮುಟ್ಟಬಾರದು. ಶೂದ್ರರು ವಿದ್ಯೆ ಕಲಿಯಬಾರದು. ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರಿಗಾಗಿ ದುಡಿಯಬೇಕು. ಅವರ ಸೇವೆಯಿಂದಲೇ ಶೂದ್ರರಿಗೆ ಮುಕ್ತಿ. ವೈಶ್ಯರು ಮಾತ್ರ ವ್ಯಾಪಾರ ಮಾಡಬೇಕು.

ಕ್ಷತ್ರಿಯರು ಮಾತ್ರ ದೇಶ ಆಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕ್ಷತ್ರಿಯರು, ವೈಶ್ಯರು ಸೇರಿದಂತೆ ಎಲ್ಲರೂ ಬ್ರಾಹ್ಮಣರಿಗೆ ತಲೆಬಾಗಬೇಕು. ಬ್ರಹ್ಮನ ತಲೆಯಿಂದ, ತೋಳಿನಿಂದ, ಎದೆಯಿಂದ, ಕಾಲಿನಿಂದ ಹುಟ್ಟಿದವರು ಎಂಬಿತ್ಯಾದಿ ಹೆಸರಲ್ಲಿ ಸಮಾಜವನ್ನು ಒಡೆದು, ಅವರನ್ನು ಆಳಿದ್ದು ಬ್ರಿಟಿಷರೂ ಅಲ್ಲ, ಮೊಗಲರೂ ಅಲ್ಲ, ದೆಹಲಿ ಸುಲ್ತಾನರೂ ಅಲ್ಲ. ಇದೇ ನೆಲದಲ್ಲಿ ಹುಟ್ಟಿದ ಮೇಲ್ವರ್ಣೀಯರೇ ಒದು ಆಳುವ ನೀತಿಗೆ ತಳಹದಿಯನ್ನು ಹಾಕಿ ಕೊಟ್ಟವರು.

ಒಡೆದು ಆಳುವ ನೀತಿಯ ಬೇರು, ಈ ದೇಶದ ವರ್ಣಾಶ್ರಮದಲ್ಲಿದೆ.ಒಂದೆರಡು ಶತಮಾನವಲ್ಲ, ಹಲವು ಸಹಸ್ರ ವರ್ಷಗಳ ಕಾಲ ಜಾತಿಯ ಆಧಾರದಲ್ಲಿ ಈ ದೇಶದ ಜನರನ್ನು ಒಡೆದು, ಸುಖಸುಪ್ಪತ್ತಿಗೆಯಲ್ಲಿ ಬದುಕಿದವರು ಇಲ್ಲಿನ ಮೇಲ್ವರ್ಣೀಯರು. ಅದರ ಫಲವಾಗಿ ಇಲ್ಲಿನ ಶೂದ್ರರು ಮತ್ತು ಪಂಚಮರು ಅಥವಾ ದಲಿತರು ತಮ್ಮ ಬದುಕನ್ನು ಸಂಪೂರ್ಣ ಮೇಲ್ವರ್ಣೀಯರ ಸುಖಕ್ಕಾಗಿ ಅರ್ಪಿಸಬೇಕಾಯಿತು. ವಿದ್ಯೆಯಿಲ್ಲದೆ, ಸ್ವಾತಂತ್ರವಿಲ್ಲದೆ ನರಳಬೇಕಾಯಿತು.

ಸಣ್ಣ ಸಂಖ್ಯೆಯ ಮೇಲ್ವರ್ಣೀಯರು ಬಹುಸಂಖ್ಯೆಯ ಜನರನ್ನು ಜಾತಿಯ ಹೆಸರಿನಲ್ಲಿ ಒಡೆಯುವ ಮೂಲಕ ಅವರನ್ನು ಬರ್ಬರವಾಗಿ ಶೋಷಿಸಿದರು.ಅಂತಹ ಶೋಷಣೆಯನ್ನು ಬ್ರಿಟಿಷರಾಗಲಿ, ಮೊಗಲರಾಗಲಿ ಈ ದೇಶದ ಜನರ ಮೇಲೆ ನಡೆಸಲಿಲ್ಲ. ಬ್ರಿಟಿಷರು ಈ ದೇಶಕ್ಕೆ ಕಾಲಿಟ್ಟಾಗ ಈ ನೆಲದಲ್ಲಿ ಒಡೆದು ಆಳುವ ನೀತಿ ಜಾರಿಯಲ್ಲಿತ್ತು. ಬ್ರಿಟಿಷರು ಇಲ್ಲಿಯ ಜನರನ್ನು ಗುಲಾಮರಾಗಿಸುವ ಮೊದಲೇ, ಇಲ್ಲಿರುವ ಬಹುಸಂಖ್ಯೆಯ ಜನರು ಸಣ್ಣ ಸಂಖ್ಯೆಯ ಮೇಲ್ವರ್ಣೀಯ ಬ್ರಾಹ್ಮಣರ ಗುಲಾಮರಾಗಿ ಬದುಕುತ್ತಿದ್ದರು.

ಕೇರಳದಂತಹ ರಾಜ್ಯದಲ್ಲಿ, ನಂಬೂದಿರಿಗಳ ಎದುರುಗಡೆ ಶೂದ್ರ ಮಹಿಳೆಯರು ರವಿಕೆಯನ್ನೂ ಧರಿಸುವಂತಿರಲಿಲ್ಲ. ಮಾನಮುಚ್ಚಿ ಬದುಕುವಂತಿರಲಿಲ್ಲ. ಮೇಲ್ವರ್ಣೀಯರ ಕ್ರೌರ್ಯ, ಒಡೆದು ಆಳುವ ರಾಜಕೀಯವನ್ನು ನೋಡಿ ಬ್ರಿಟಿಷರೇ ಬೆಚ್ಚಿ ಬಿದ್ದಿದ್ದರು. ಬ್ರಿಟಿಷರು ಕೆಲವು ಕಠೋರ ಕಾಯ್ದೆ ತಂದ ಬಳಿಕವಷ್ಟೇ ಬ್ರಾಹ್ಮಣರ ತಂತ್ರಕ್ಕೆ ಸೋಲಾಯಿತು. ಇಂದಿಗೂ ಒಡೆದು ಆಳುವ ಮೇಲ್ವರ್ಣೀಯರ ತಂತ್ರದ ಪ್ರಭಾವದಿಂದ ಶೋಷಿತ ಜನ ಹೊರಬಂದಿಲ್ಲ. ಜಾತಿ ಈ ದೇಶದಲ್ಲಿ ಇನ್ನೂ ಉಳಿದಿರುವುದೇ ಅದಕ್ಕೆ ಉದಾಹರಣೆ.

ಜಾತಿ ಜನಗಣತಿ ನಡೆಸುವುದು ದೇಶವನ್ನು ಒಡೆಯುವುದಕ್ಕಲ್ಲ. ಒಡೆದ ದೇಶವನ್ನು ಒಂದಾಗಿಸುವುದಕ್ಕಾಗಿ ಜಾತಿ ಜನಗಣತಿ ನಡೆಸಬೇಕಾಗಿದೆ. ಮೇಲ್ವರ್ಣೀಯರು ಒಡೆದ ಈ ಸಮಾಜವನ್ನು ಮತ್ತೆ ಮರು ಜೋಡಿಸುವುದಕ್ಕಾಗಿ ಜಾತಿ ಜನಗಣತಿಯನ್ನು ನಡೆಸಬೇಕು. ಇರುವ ಜಾತಿಗಳನ್ನು ಗುರುತಿಸಿ, ಅದರಲ್ಲಿ ಇನ್ನೂ ಮೇಲ್ವರ್ಣೀಯರ ಒಡೆದು ಆಳುವ ನೀತಿಗೆ ಬಲಿಯಾಗಿ, ಶೋಷಣೆಗೊಳಗಾಗುತ್ತಿರುವ ದುರ್ಬಲ ಜಾತಿಗಳನ್ನು ಗುರುತಿಸಬೇಕು.

ಬಳಿಕ ಅವುಗಳನ್ನು ಸಬಲವನ್ನಾಗಿಸುವ ಕೆಲಸ, ಬಲಿಷ್ಠವನ್ನಾಗಿಸುವ ಕೆಲಸ ನಡೆಯಬೇಕು. ಮೇಲ್ವರ್ಣೀಯರ ಹಿಡಿತದಿಂದ ಅವರನ್ನು ಸಂಪೂರ್ಣ ಸ್ವತಂತ್ರಗೊಳಿಸಬೇಕು. ಆ ಮೂಲಕ ಹಿಂದೂ ಧರ್ಮ ಬಲಿಷ್ಠವಾಗುತ್ತದೆ. ಜೊತೆಗೆ ದೇಶವೂ ಬಲಿಷ್ಠವಾಗುತ್ತದೆ. ಆದುದರಿಂದ ಜಾತಿ ಜನಗಣತಿ ನಡೆಯಲೇ ಬೇಕು. ಒಡೆದು ಆಳುವ ನೀತಿಯ ಹುನ್ನಾರಗಳ ವಿರುದ್ಧ ಜಾತಿ ಜನಗಣತಿ ಒಂದು ದೊಡ್ಡ ಅಸ್ತ್ರವಾಗಿದೆ. ಇದನ್ನು ವಿರೋಧಿಸುವವರು ಬಿಜೆಪಿಗರಿರಲಿ, ಆರೆಸ್ಸೆಸ್‌ಗರಿರಲಿ, ಕಾಂಗ್ರೆಸ್‌ಗರಿರಲಿ. ಅವರು ಜಾತಿ ಜನಗಣತಿಗೆ ಯಾಕೆ ಹೆದರುತ್ತಾರೆ ಎನ್ನುವುದನ್ನು ಇಲ್ಲಿ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.

varthabharathi…

ಜಾತಿ ಆಧಾರಿತ ಜನಗಣತಿ ಮತ್ತು ಅಂಬೇಡ್ಕರ್ Caste-based Census & Ambedkar:Ho.ba.Raghothama


ಜಾತಿ ಆಧಾರಿತ ಜನಗಣತಿ ಮತ್ತು ಅಂಬೇಡ್ಕರ್

ಜನಗಣತಿ ಹಾಗೆಂದರೆ ಸರಳವಾಗಿ ಜನರನ್ನು ಎಣಿಸುವುದು ಎಂದರ್ಥ. ಹಾಗಂತ ಕುರಿಗಳನ್ನು ಲೆಕ್ಕ ಹಾಕುವ ಹಾಗೆ ಜನರನ್ನು ಲೆಕ್ಕ ಹಾಕಲಾಗು ತ್ತದೆಯೇ? ಖಂಡಿತ ಇಲ್ಲ. ಜನಗಣತಿ ಒಂದು ದೇಶದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಕನ್ನಡಿ ಹಿಡಿಯುತ್ತದೆ. ಹಿಡಿಯುತ್ತದೆ ಎನ್ನುವು ದಕ್ಕಿಂತ ಕನ್ನಡಿ ಹಿಡಿಯಲೇಬೇಕು ಎನ್ನುವುದು ಹೆಚ್ಚು ಸೂಕ್ತ. ಅದರಲ್ಲೂ ಸಂಕೀರ್ಣ ಸಾಮಾಜಿಕ ವ್ಯವಸ್ಥೆ ಹೊಂದಿರುವ ಭಾರತದಂತಹ ಈ ದೇಶದ ವಾಸ್ತವ ಸಂಗತಿ ಗಳನ್ನು ಜನಗಣತಿ ಬಿಂಬಿಸುವಂತಿರಬೇಕು.ಈ ದೇಶದ ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸಲು ನಿಖರ ಚಿತ್ರಣ ನೀಡುವಂತಿರ ಬೇಕು. ಹಾಗಿದ್ದರೆ ಇಲ್ಲಿಯವರೆಗೆ ನಡೆದ ಜನಗಣತಿ ಗಳು ಇಂತಹ ಅಂಶಗಳನ್ನು ಬಿಂಬಿಸಿಲ್ಲವೇ? ಅಂತಹ ನಿಖರ ಚಿತ್ರಣವನ್ನು ನೀಡಿಲ್ಲವೇ ಎಂದರೆ ಖಂಡಿತ ನೀಡಿವೆ. ಆದರೆ ಅದು 1931ರ ವರೆಗೆ ಮಾತ್ರ! ಯಾಕೆಂದರೆ 1931ರ ವರೆಗೆ ಮಾತ್ರ ಈ ದೇಶದಲ್ಲಿ ಜಾತಿ ಆಧಾರಿತ ಜನಗಣತಿ ನಡೆಯಿತು. ತನ್ಮೂಲಕ ದೇಶದ ಸಾಮಾಜಿಕ ವ್ಯವಸ್ಥೆಗೆ ಸ್ಪಷ್ಟ ಕನ್ನಡಿ ಹಿಡಿಯಿತು.ಅಂತಹ ಕನ್ನಡಿಯಿಂದ ಮೂಡಿದ ಬಿಂಬವನ್ನು ಆಡಳಿತಾರೂಢ ಬ್ರಿಟೀಷರಿಗೆ ತೋರಿಸಿ ‘ನೋಡಿ ನಮ್ಮ ಜನಗಳ ಸ್ಥಿತಿಗತಿ ಹೀಗಿದೆ’ ಎಂದು ಈ ದೇಶದಲ್ಲಿ ಪ್ರಪ್ರಥಮವಾಗಿ ಜಾತಿ ಆಧಾರಿತ ಜನಗಣತಿಯಿಂದ ಪ್ರಯೋಜನ ಪಡೆದ ಜನನಾಯಕನೆಂದರೆ ಡಾ. ಅಂಬೇಡ್ಕರ್ ಮಾತ್ರ. ಅಗತ್ಯವಾಗಿ ಅಂತಹ ಪ್ರಯೋಜನ ಪಡೆದ ಜನಸಮೂಹವೆಂದರೆ ಅಸ್ಪಶರು ಅಥವಾ ದಲಿತರು. ಅಸ್ಪಶರಿಗೆ ಜಾತಿ ಆಧಾರಿತ ಗಣತಿಯಿಂದ ಉಂಟಾದ ಅನುಕೂಲದ ಯಶೋಗಾಥೆಯನ್ನು ಸ್ವತಃ ಅಂಬೇಡ್ಕರ್‌ರೆ ದಾಖಲಿಸಿದ್ದಾರೆ.ಜಾತಿ ಆಧಾರಿತ ಜನಗಣತಿಯ ಬಗ್ಗೆ ಗೊಂದಲವೆದ್ದಿರುವ ಈ ದಿನಗಳಲ್ಲಿ ಅಂತಹ ಗಣತಿಯಿಂದ ಆಗುವ ಪ್ರಯೋಜನವೇನು? ಅಂತಹ ಗಣತಿ ಯಾಕೆ ಬೇಕು? ಅಂತಹ ಗಣತಿಗೆ ಯಾರಿಂದ ವಿರೋಧವಿರುತ್ತದೆ? ಅಂತಹ ವಿರೋಧಕ್ಕೆ ಉತ್ತರವೇನು? ಇತ್ಯಾದಿ ಪ್ರಶ್ನೆಗಳಿಗೆ ಅಂಬೇಡ್ಕರ್‌ರವರ ಬರಹಗಳಲ್ಲಿ ಸ್ಪಷ್ಟನೆ ಸಿಗುತ್ತದೆ. ರಾಜ್ಯ ಸರಕಾರವೇ ಪ್ರಕಟಿಸಿರುವ ಡಾ॥ಜಾತಿಯು ಈಗಲೂ ಸಹ ಭಾರತದ ಸಾಮಾಜಿಕ ಪಾತಳದ ಅಡಿಗಲ್ಲು ಎನ್ನುತ್ತಾರೆ.

ಆದ್ದರಿಂದ ಜಾತಿಯ ದಾಖಲಾತಿ ಯು ಭಾರತೀಯ ಸಮಾಜದ ವಿವಿಧ ಸಾಮಾಜಿಕ ಸ್ತರಗಳಲ್ಲಿ ಉಂಟಾಗಿರುವ ಬದಲಾವಣೆಗಳಿಗೆ ಅತ್ಯುತ್ತಮವಾದ ಕೈಪಿಡಿಯಾಗಿದೆ. ಮುಂದುವರಿದು ಅಂಬೇಡ್ಕರರವರು ಹಿಂದೂ ಎಂಬ ಪದವನ್ನು ಅದರ ಅತ್ಯಂತ ವ್ಯಾಪಕವಾದ ಅರ್ಥದಲ್ಲಿ ಬಳಸಿ ನೋಡಿದರೆ ಪ್ರತಿಯೊಬ್ಬ ಹಿಂದೂವು ಒಂದು ಜಾತಿಯಲ್ಲಿ ಹುಟ್ಟಿದ್ದಾನೆ ಮತ್ತು ಆ ಜಾತಿಯು ಅವನ ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ಕೌಟುಂಬಿಕ ಜೀವನವನ್ನು ತೊಟ್ಟಿಲಿನಿಂದ ಶ್ಮಶಾನ ಗುಂಡಿಯವರೆಗೆ ನಿರ್ಧರಿಸುತ್ತದೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಸಮಾಜದ ವಿವಿಧ ಸ್ತರಗಳನ್ನು ನಿರ್ಧರಿಸುವುದರಲ್ಲಿ ಪ್ರಮುಖವಾದ ಅಂಶಗಳೆಂದರೆ ಸಂಪತ್ತು, ವಿದ್ಯಾಭ್ಯಾಸ ಮತ್ತು ಉದ್ಯೋಗ; ಇವು ಅಲ್ಲಿ ಚಲನಾತ್ಮಕವಾಗಿವೆ ಮತ್ತು ಉದಾರ ಭಾವನೆಗಳಿಂದ ಕೂಡಿವೆ. ಇದರಿಂದಾಗಿ ಹುಟ್ಟು ಮತ್ತು ವಂಶಪಾರಂಪರ್ಯತೆಯ ಸ್ಥಾನದ ಬಿಗಿ ಮುಷ್ಟಿಯನ್ನು ಅವು ಸಹವರ್ತನ ಗೊಳಿಸುತ್ತವೆ. ಭಾರತದಲ್ಲಾದರೋ ಧಾರ್ಮಿಕ ಮತ್ತು ಸಾಮಾಜಿಕ ಸ್ಥಾನಮಾನಗಳು ಹಾಗೂ ಸಾಂಪ್ರದಾಯಿಕ ಉದ್ಯೋಗಗಳು ಉಳಿದೆಲ್ಲಾ ಅಂಶಗಳನ್ನು ಬದಿಗೊತ್ತುತ್ತಿವೆ.

ಹೀಗಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಜನರ ಆರ್ಥಿಕ ಅಥವಾ ಉದ್ಯೋಗ ಆಧಾರಿತ ವಿಭಜನೆಯು ಜನಗಣತಿಗಳಲ್ಲಿ ಸೂಚಿತವಾಗುವ ಅಂಕಿ ಅಂಶಗಳ ಕಲೆ ಹಾಕುವಿಕೆಗೆ ನೆರವಾಗುತ್ತವೆ. ಅದೇ ಭಾರತದ ಜನಸಂಖ್ಯೆಯ ವಿಭಜನೆಗೆ ಧರ್ಮ ಮತ್ತು ಜಾತಿಗಳ ವ್ಯತ್ಯಾಸವೇ ಆಧಾರವಾಗುತ್ತದೆ. ರಾಷ್ಟ್ರೀಯವಾಗಿ ಮತ್ತು ಸಾಮಾಜಿಕವಾಗಿ ಜಾತಿ ಎಂಬ ಸಂಸ್ಥೆಯನ್ನು ನಾವು ಯಾವರೀತಿಯಲ್ಲಿ ವ್ಯಾಖ್ಯಾನಿಸಿದರು ಸರಿಯೇ, ಅದನ್ನು ತಳ್ಳಿಹಾಕಿ ಪ್ರಯೋಜನವಿಲ್ಲ; ಎಲ್ಲಿಯವರೆಗೆ ಒಬ್ಬನ ಅಧಿಕೃತ ಮತ್ತು ಸಾಮಾಜಿಕ ವ್ಯಕ್ತಿತ್ವದ ಭೇದಾತ್ಮಕ ಲಕ್ಷಣಗಳನ್ನು ಗುರುತಿಸಲು ಜಾತಿಯನ್ನು ಬಳಸುವುದು ಮುಂದುವರಿಯುತ್ತದೆಯೋ ಅಲ್ಲಿಯವರೆಗೆ ಜನಗಣತಿಯಲ್ಲಿ ಜಾತಿಯನ್ನು ನಮೂದಿಸುವುದು ಅಪೇಕ್ಷಣಿಯ ಮತ್ತು ಹಾಗೆ ನಮೂದಿಸುವುದರಿಂದ ಜಾತಿಯತೆಯನ್ನು ಮುಂದುವರಿಸಿದ ಹಾಗೆ ಆಗುತ್ತದೆ ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ ಎನ್ನುತ್ತಾರೆ.

ಮುಂದುವರಿದು ಅಂಬೇಡ್ಕರರವರು ಜನಗಣತಿಯು ಅಸ್ಪಶರನ್ನು ಗುರುತಿಸಿದ ಬಗೆಯನ್ನು ವಿವರಿಸುತ್ತಾ ಹೀಗೆ ಬರೆಯುತ್ತಾರೆ. 1911 ರ ಜನಗಣತಿಯು ಒಂದು ಹೆಜ್ಜೆ ಮುಂದೆ ಹೋಗಿ ಸ್ಪಶ್ಯರಿಂದ ಅಸ್ಪಶರನ್ನು ಹೊರತು ಪಡಿಸಿ ಗುರುತಿಸಲು ಬೇಕಾದ ಹತ್ತು ಸೂತ್ರಗಳನ್ನು ರೂಪಿಸಿತು.

ಈ ಸೂತ್ರಗಳ ಪ್ರಕಾರ ಜನಗಣತಿಯ ಮೇಲ್ವಿಚಾರಕರು ಶೋಷಿತ ಜಾತಿಗಳ ಮತ್ತು ಬುಡಕಟ್ಟುಗಳ ನಮೂದನೆಯನ್ನು ಕೆಳಕಂಡಂತೆ ಮಾಡಿದರು..

1) ಬ್ರಾಹ್ಮಣರ ಶ್ರೇಷ್ಠತೆಯನ್ನು ನಿರಾಕರಿಸುವವರು.

2) ಬ್ರಾಹ್ಮಣ ಅಥವಾ ಇತರ ಹಿಂದೂ ಗುರುಗಳಿಂದ ಮಂತ್ರವನ್ನು ಸ್ವೀಕರಿಸದವರು.

3) ವೇದಗಳ ಶ್ರೇಷ್ಟತೆಯನ್ನು ನಿರಾಕರಿಸುವವರು.

4) ಪ್ರಮುಖ ಹಿಂದೂ ದೇವತೆಗಳನ್ನು ಪೂಜೆ ಮಾಡದವರು.

5) ಕಟ್ಟಾ ಬ್ರಾಹ್ಮಣರಿಂದ ಸೇವೆ ಪಡೆಯದವರು.

6) ಬ್ರಾಹ್ಮಣ ಪೂಜಾರಿಗಳನ್ನೇ ಹೊಂದದವರು.

7) ಸಾಮಾನ್ಯ ದೇವಾಲಯಕ್ಕೆ ಪ್ರವೇಶ ಇಲ್ಲದವರು.

8) ಕೇವಲ ಸ್ಪರ್ಶದಿಂದ ಮಾತ್ರ ಮಾಲಿನ್ಯ ಉಂಟುಮಾಡುವವರು.

9) ಸತ್ತವರನ್ನು ಹೂಳುವವರು ಮತ್ತು.

10) ಗೋವನ್ನು ಪೂಜಿಸದವರು ಮತ್ತು ಗೋಮಾಂಸವನ್ನು ತಿನ್ನುವವರು.

ಹೀಗೇ ಅಂಬೇಡ್ಕರರವರು ಆ ಸೂತ್ರಗಳನ್ನು ಮಂಡಿಸುತ್ತಾರೆ. ಜನಗಣತಿಯ ಈ ಸೂತ್ರದಿಂದ ಅಸ್ಪಶರಿಗಾದ ಪ್ರಯೋಜನವೆಂದರೆ ಅಸ್ಪಶರನ್ನು ಸ್ಪಶ್ಯ ಹಿಂದೂಗಳಿಂದ ಬೇರ್ಪಡಿಸಿತು. ತನ್ಮೂಲಕ ಅಸ್ಪಶ್ಯರಿಗೆ ತಮ್ಮ ಜನಸಂಖ್ಯೆಯ ಆಧಾರದ ಮೇಲೆ ಪ್ರಾತಿನಿಧ್ಯ ಕೇಳಲು ಒಂದು ವೇದಿಕೆಯನ್ನು ಸೃಷ್ಟಿಸಿತು. ಇದರ ಪ್ರಕಾರ 1930 ರಲ್ಲಿ ಭೇಟಿ ನೀಡಿದ ಸೈಮನ್ ಆಯೋಗವು ಅಸ್ಪಶರ ಜನಸಂಖ್ಯೆ 4 ಕೋಟಿ 45 ಲಕ್ಷ ಎಂದಿದೆ.

ಮುಂದೆ ಇದರ ಆಧಾರದ ಮೇಲೆ ಅಂಬೇಡ್ಕರ್ ಶಾಸನ ಸಭೆಗಳಲ್ಲಿ ಅಸ್ಪಶರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ಸೈಮನ್ ಆಯೋಗಕ್ಕೆ ಮನವಿ ಸಲ್ಲಿಸಿದ್ದು, ದುಂಡುಮೇಜಿನ ಸಭೆಗಳಲ್ಲಿ ಪ್ರತ್ಯೇಕ ಮತದಾನ ಪದ್ಧತಿ ಬೇಕೆಂದು ಒತ್ತಾಯಿಸಿದ್ದು, ಪರಿಣಾಮವಾಗಿ 1932 ರ ಪೂನಾ ಒಪ್ಪಂದದಲ್ಲಿ ಅಸ್ಪಶ್ಯರಿಗೆ ಜಂಟಿ ಚುನಾಯಿತ ವ್ಯವಸ್ಥೆ ಜಾರಿಯಾದದ್ದು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಜಾರಿಯಾದದ್ದು, ಈ ಎಲ್ಲಾ ಅಂಶಗಳು 1935ರ ಭಾರತ ಸರಕಾರ ಕಾಯಿದೆಯಲ್ಲಿ ಶಾಸನವಾಗಿ ರೂಪಿತಗೊಂಡು ಜಾರಿಗೆ ಬಂದಿದ್ದು ಈಗ ಇತಿಹಾಸ.

ಅಸ್ಪಶರ ಕರಾಳ ಇತಿಹಾಸದ ಪುಟಗಳಲ್ಲಿ ಇಂತಹ ಭವ್ಯ ಇತಿಹಾಸದ ಪುಟ ಸೃಷ್ಟಿಯಾದದ್ದು, ಅವರ ಹಣೆಬರಹ ಬದಲಾದದ್ದು ಖಂಡಿತ ಜಾತಿ ಆಧಾರಿತ ಜನಗಣತಿಯಿಂದ. ಅವರ ಸಮಗ್ರ ಸಾಮಾಜಿಕ ಆರ್ಥಿಕ ಸ್ಥಿತಿಗತಿಯನ್ನು ಅದು ವ್ಯವಸ್ಥೆಗೆ ಸ್ಪಷ್ಟವಾಗಿ ಬಿಂಬಿಸಿತು. ತನ್ಮೂಲಕ ಅಸ್ಪಶರ ಪುರೋಭಿವೃದ್ಧಿಗೆ ನಾಂದಿ ಹಾಡಿತು. ದುರಂತವೆಂದರೆ 1931 ರವರೆಗೂ ನಡೆದ ಈ ಜಾತಿ ಆಧಾರಿತ ಜನಗಣತಿ ನಂತರ ಇಲ್ಲಿಯವರೆಗೆ ಯಾಕೆ ನಡೆದಿಲ್ಲ? ಅದರಲ್ಲೂ ಸ್ವಾತಂತ್ರ್ಯ ಭಾರತದಲ್ಲಿ ಒಮ್ಮೆಯೂ ಜಾತಿ ಆಧಾರಿತ ಜನಗಣತಿ ನಡೆದಿಲ್ಲಾ ಯಾಕೆ? ಏನೆ ಆಗಲಿ ಈ ಎಲ್ಲಾ ಪ್ರಶ್ನೆಗಳಿಗೆ ಹೆಚ್ಚು ಕಡಿಮೆ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಈ ದೇಶವನ್ನು ಆಳಿರುವ ಕಾಂಗ್ರೆಸ್ ಮತ್ತು ಇತರ ಸ್ಥಾಪಿತ ಹಿತಾಸಕ್ತಿಗಳ ಪರವುಳ್ಳ ಪಕ್ಷಗಳು ಮತ್ತು ವ್ಯಕ್ತಿಗಳೇ ಉತ್ತರಿಸ ಬೇಕು.

1931 ರವರೆಗಿನ ಜನಗಣತಿಯಿಂದ ಅಸ್ಪಶರು ಪ್ರಯೋಜನ ಪಡೆದ ಹಾಗೆ ಎಲ್ಲಿ ಇತರೆ ಹಿಂದುಳಿದ ವರ್ಗಗಳು ಅರ್ಥಾತ್ ಓ.ಬಿ.ಸಿಗಳು ಅದೇ ದಾರಿಯಲ್ಲಿ ಸಾಗುತ್ತಾರೋ ಎಂದು ಸ್ಥಾಪಿತ ಹಿತಾಸಕ್ತಿಗಳು ಎಚ್ಚೆತ್ತುಕೊಂಡವೆ? ಆ ನಿಟ್ಟಿನಲ್ಲಿ ಜನಗಣತಿಯ ಹೃದಯದಂತಿದ್ದ ಜಾತಿ ಆಧಾರ ಎಂಬ ಅಂಶವನ್ನು ಇಂತಹ ಹಿತಾಸಕ್ತಿಗಳು ಕಿತ್ತು ಬಚ್ಚಿಟ್ಟವೆ? ಅಥವಾ ಅಸಂಘಟಿತ ಓ.ಬಿ.ಸಿಗಳಿಗೆ ಇದರ ತಿರುಳು ಅರ್ಥವಾಗಲಿಲ್ಲವೇ? ಖಂಡಿತ ಇವೆಲ್ಲಾ ಕ್ರೂರ ಅನುಮಾನ ಹುಟ್ಟಿಸುವ ಪ್ರಶ್ನೆ ಗಳು ಮತ್ತು ಆ ಪ್ರಶ್ನೆಗಳಿಗೆ ಉತ್ತರಿಸ ಬೇಕಾದವರು ಮತ್ತದೆ ಪಕ್ಷಗಳು ಮತ್ತು ವ್ಯಕ್ತಿಗಳು.

ಮಂಡಲ್ ವರದಿ ಜಾರಿಯಾಗಿರುವ ಈ ದಿನಗಳಲ್ಲಿ ಖಂಡಿತ ಓ.ಬಿ.ಸಿಗಳಿಗೆ ಲಭ್ಯವಾಗಬೇಕಾದ ಪ್ರಯೋಜನಗಳು ಇನ್ನಷ್ಟು ವ್ಯವಸ್ಥಿತವಾಗಿ, ಪರಿಣಾಮಕಾರಿಯಾಗಿ ತಲುಪಬೇಕು. ಅದಕ್ಕಾಗಿ ಜಾತಿ ಆಧಾರಿತ ಜನಗಣತಿ ಬೇಕೇ ಬೇಕು. ಈ ನಿಟ್ಟಿನಲ್ಲಿ ತಡವಾಗಿಯಾದರೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಹೆಜ್ಜೆ ಇಡಲಿ. ಅರವತ್ತು ವರ್ಷಗಳಿಂದ ಆಗಿರುವ ವಂಚನೆಗೆ ಈಗಲಾದರು ಪ್ರಾಯಶ್ಚಿತ ಸಿಗಲಿ. ತನ್ಮೂಲಕ ಈ ಬಾರಿ ಜಾತಿ ಆಧಾರಿತ ಜನಗಣತಿ ನಡೆಯಲೇಬೇಕು ಎಂಬುದಷ್ಟೆ ಸದ್ಯದ ಕಳಕಳಿ. ಹಾಗೇ ಆಗುತ್ತದೆಯೇ? ಕಾದು ನೋಡೋಣ

* ರಘೋತ್ತಮ ಹೊ. ಬ. ಚಾಮರಾಜನಗರ

Raghothama, Chamarajanagar

ಶುಕ್ರವಾರ – ಮೇ -28-2010

refer:varthabharathi