Who did Gandhi fight for? Ho.Ba.Raghothama Chamarajanagar


`ಗಾ೦ಧಿ’ ಹೋರಾಟ ಯಾರ ವಿರುದ್ಧ

ಹೊ.ಬ.ರಘೋತ್ತಮ, ಚಾಮರಾಜನಗರಅ೦ಬೇಡ್ಕರ್, ಎ೦ದರೆ ಇತಿಹಾಸದ ಉದ್ದಕ್ಕೂ ಸ೦ಘರ್ಷದ ಹೆಸರು. ಆ ಸ೦ಘರ್ಷ ಈ ದೇಶದ ಸ್ತಾಪಿತ ಹಿತಾಸಕ್ತಿಗಳ ವಿರುದ್ದ,ಜಾತೀಯ ಮನಸ್ಸುಗಳ ವಿರುದ್ಧ, ಜಡ್ಡುಗಟ್ಟಿದ ವ್ಯವಸ್ಥೆಯ ವಿರುದ್ಧ. ಅ೦ತಹ ಸ್ತಾಪಿತ ಹಿತಾಸಕ್ತಿಗಳು ವ್ಯವಸ್ಥೆ ಹೀಗೆ ಇರಲಿ ಎ೦ದು  ಬಯಸುತ್ತದೆ. ಅವುಗಳಿಗೆ ಬದಲಾವಣೆ ಬೇಕಿಲ್ಲ. ಯಾಕೆ೦ದರೆ ಬದಲಾವಣೆ ಎಲ್ಲಿ ತಮ್ಮ ಅಸ್ತಿ‌ತ್ವಕ್ಕೆ ಸ೦ಚಕಾರ ತ೦ದೊಡ್ಡುತ್ತದೆಯೋ ಎ೦ಬ ಭಯ.

ಸ್ಥಾಪಿತ ಹಿತಾಸಕ್ತಿಗಳ ಇ೦ತಹ ಧೋರಣೆ ಎರಡು ಸಾವಿರ ವರ್ಷಗಳಿ೦ದ ಈ ದೇಶವನ್ನು `ಹೀಗೆಯೇ’ ಇಟ್ಟಿದೆ. ಜಾತಿಪದ್ದತಿ, ಮನುವಾದಿ ಶ್ರೇಣೀಕೃತ ವ್ಯವಸ್ಥೆ ಅಬ್ಬಬ್ಬಾ ಈ ಪದಗಳನ್ನು ಹೇಳಿ ಕೇಳಿ ನಮ್ಮ ನಾಲಿಗೆ ಮತ್ತು ಕಿವಿಗಳ ತೂತು ಬಿದ್ದು ಹೋಗಿವೆ. ಆದರೆ ಸ್ಥಾಪಿತ ಹಿತಾಸಕ್ತಿಗಳಿಗೆ ಇವು `ಸವಿರುಚಿ’ , ಕರ್ಣಾನ೦ದ! ಇ೦ತಹ ಆನ೦ದವನ್ನು, ರುಚಿಯನ್ನು ಹಾಗೆಯೇ ಉಳಿಸಲು ೧೮೮೫ರಲ್ಲಿ ಸ್ಥಾಪಿತವಾದ ಮತ್ತೊ೦ದು ಸ೦ಸ್ಥೆಯೇ ಕಾ೦ಗ್ರೆಸ್. ಕಾ೦ಗ್ರೆಸ್ ಹಾಗೆ೦ದಾಕ್ಷಣ ಇತಿಹಾಸಕಾರರು ಸ್ವಾತ೦ತ್ರ್ಯ ಹೋರಾಟವನ್ನೇ ಅದರ ಮೇಲೆ ಆರೋಪಿಸುತ್ತಾರೆ. ಆದರೆ ಅದು ಯಾರ ವಿರುದ್ಧ? ವಿದೇಶಿಯರ ವಿರುದ್ಧ,ಬ್ರಿಟಿಷರ ವಿರುದ್ಧ ಸ್ವದೇಶಿ ಅಸ್ಪೃಶರ ಪರ, ಹಿ೦ದುಳಿದವರ ಪರ ಖ೦ಡಿತ ಅದರ ಹೋರಾಟ ಸೊನ್ನೆ! ಯಾಕೆ೦ದರೆ ಕಾ೦ಗ್ರೆಸನ್ನು ಕಾಡುವುದು ಮತ್ತದೇ ಸ್ಥಾಪಿತ ಹಿತಾಸಕ್ತಿ.

ಇತಿಹಸದಲ್ಲಿ ಇ೦ತಹ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಹೋರಾಡಿದ ದೊಡ್ಡ ಪಡೆಯೇ ನಮ್ಮ ಕಣ್ಣಮು೦ದಿದೆ . ಮಹಾತ್ಮ ಜ್ಯೋತಿ ಬಾಫುಲೆ,ಶಾಹುಮಹರಾಜ್,ನಾಲ್ವಡಿ ಕೃಷ್ಣರಾಜ ಒಡೆಯರ್,ಪೆರಿಯಾರ್ ರಾಮಸ್ವಾಮಿ ನಾಯ್ಕರ್,ಅ೦ಬೇಡ್ಕರ್ ಮು೦ತಾದವರು. ಈ ಪಟ್ಟಿಯನ್ನು ಗಮನಿಸಿದರೆ ಇವರ್‍ಯಾರೂ ಕಾ೦ಗ್ರೆಸ್ನ ಹಿನ್ನೆಲೆಯಿ೦ದ ಬ೦ದವರಲ್ಲ ಎ೦ಬುದು ತಕ್ಷಣ ಅರಿವಿಗೆ ಬರುತ್ತದೆ. ಅಕಸ್ಮಾತ್ ಇದ್ದರೂ ನ೦ತರ ಅವರು ಅದನ್ನು ತೊರೆದು ಬೇರೆ ಪಕ್ಷಗಳ , ಚಳವಳಿಗಳ ಮು೦ಚೂಣಿಗೆ ಬ೦ದಿರುವುದು ಕ೦ಡುಬರುತ್ತದೆ. ಉದಾಹರಣೆಯಾಗಿ ಪೆರಿಯಾರ್ ನಿಲ್ಲುತ್ತಾರೆ. ಮಹಾತ್ಮಗಾ೦ಧಿಯವರನ್ನು ಕೂಡ ಅ೦ತಹ ಸ್ಥಾಪಿತ ಹಿತಾಸಕ್ತಿಯಲ್ಲೊ೦ದಾದ ಅಸ್ಪೃಶತೆಯ ವಿರುದ್ಧ ಹೋರಾಡಿದವರೆನ್ನುತ್ತಾರೆ. ಮಹಾತ್ಮಗಾ೦ಧಿಯವರ `ಈ ಹೋರಾಟ’ ದು೦ಡು ಮೇಜಿನ ಸಭೆಗಳ ನ೦ತರ, ಪೂನಾ ಒಪ್ಪ೦ದದ ನ೦ತರ, ಪ್ರಾರ೦ಭವಾಗಿರುವುದನ್ನು ನೋಡಿದರೆ ದು೦ಡು ಮೇಜಿನ ಸಭೆಗಳಲ್ಲಿ, ಪೂನಾ ಒಪ್ಪ೦ದದಲ್ಲಿ ಅಸ್ಪೃಶರ ವಿರುದ್ಧ ಅರ್ಥಾತ್ ಅ೦ಬೇಡ್ಕರರ ವಿರುದ್ಧವೇ ಹೋರಾಡಿದ ಘಟನೆಯನ್ನು ಮರೆ ಮಾಚಲು ಅಥವಾ ಅಸ್ಪೃಶರ ಕಣ್ಣಿಗೆ ಮಣ್ಣೆರಚಿದ ಗಾ೦ಧಿ ಈ `ಪ್ರಹಸನ’ ಶುರುಮಾಡಿದರೆ೦ದು ಕಾಣುತ್ತದೆ.

೧೮೬೯ರಲ್ಲಿ ಜನಿಸಿದ ಗಾ೦ಧಿಜಿ ೧೯೨೮ರ ದು೦ಡುಮೇಜಿನ ಪರಿಷತ್, ೧೯೩೨ರ ಪೂನಾ ಒಪ್ಪ೦ದದವರೆಗೆ ಅ೦ದರೆ ಅವರಿಗೆ ಅರವತ್ತು ವರ್ಷಗಳು ತು೦ಬುವವರೆಗೆ ಅವರಿಗೆ ಅಸ್ಪೃಶತೆ ವಿರುದ್ಧ ಹೋರಾಡಿದ ಯಾವುದೇ ಉದಾಹರಣೆ ಕ೦ಡುಬರುವುದಿಲ್ಲ. ನ೦ತರವಾದರೂ ಅಸ್ಪೃಶರನ್ನು `ಹರಜನ’ರೆ೦ದು ಕರೆದಿದ್ದು, ಹರಿಜನ ಸೇವಕ ಸ೦ಘಗಳನ್ನು ತೆರೆದಿದ್ದಷ್ಟೇ ಅವರ ಸಾಧನೆ. ಆದರೆ ಆ ಸ೦ಘದ ಮೂಲಕ ದಲಿತರಿಗೆ ಕೆರೆಗಳಿಗೆ, ದೇವಸ್ಥಾನಗಳಿಗೆ, ಶಾಲೆಗಳಿಗೆ ಪ್ರವೇಶ ದೊರಕಿಸಿಕೊಟ್ಟ೦ತಹ, ಭೂಮಿ ಹ೦ಚಿಕೆಯ೦ತಹ ಯಾವುದೇ ದೊಡ್ಡ ಮಟ್ಟದ ಹೋರಾಟವನ್ನು ಮಹಾತ್ಮಗಾ೦ಧಿಯವರು ಮಾಡಲಿಲ್ಲ. ಆದರೆ ಒ೦ದ೦ತು ಮಾಡಿದರು. ಗಾ೦ಧಿ ಈ ಸ೦ಘಗಳ ಮೂಲಕ ಅಸ್ಪೃಶರನ್ನು ಕಾ೦ಗ್ರೆಸ್‍ನ ಶಾಶ್ವತ ಓಟ್‌ಬ್ಯಾ೦ಕ್ ಆಗಿ ಮಾಡಿದ್ದರು. ಎಲ್ಲೋ ಅವರ ಉದ್ದೇಶ ಇಷ್ಟೇಆಗಿತ್ತು ಕಾಣುತ್ತದೆ. ಹಾಗಿದ್ದರೆ ಅಸ್ಪೃಶರ ಉದ್ಧಾರದ ಹೆಸರುಬ೦ದಾಗ ಅವರ ಹೆಸರು ಹೇಳುವುದು ಸಣ್ಣ ಸುಳ್ಳು ಎ೦ದೆನಿಸುತ್ತದೆ!

ಇದನ್ನೆಲ್ಲಾ ಈಗ ಯಾಕೆ ಹೇಳಬೇಕಾಯಿತೆ೦ದರೆ ಹಾಲಿ ಕಾ೦ಗ್ರೆಸ್‍ನ ಯುವರಾಜ ರಾಹುಲ್‌ಗಾ೦ಧಿ  ಯವರು ಕೂಡಾ ಮಹಾತ್ಮಗಾ೦ಧಿಯವರ ಹಾದಿಯಲ್ಲೇ ಸಾಗುತ್ತಿದ್ದಾರೆ. ಹಾಗ೦ತ ರಾಹುಲ್‍ಗಾ೦ಧಿಯವರು ಅಸ್ಪೃಶರಿಗೆ ಅರ್ಥಾತ್ ದಲಿತರಿಗೆ ಹೊಸ ಹೆಸರು ನೀಡುತ್ತಿದ್ದಾರೆ. ಹೊಸ ಸೇವಕ ಸ೦ಘಗಳನ್ನು ಸ್ಥಾಪಿಸುತ್ತಿದ್ದಾರೆ ಎ೦ದರ್ಥವಲ್ಲ.(ಆ ಕೆಲಸವನ್ನು ಗಾ೦ಧಿ ಎ೦ದೋ ಮಾಡಿ ಮುಗಿಸಿಹೋಗಿದ್ದಾರೆ!) ಪ್ರಸ್ತುತಕ್ಕೆ ಸ೦ಬ೦ಧಿಸಿದ೦ತೆ ದಲಿತರ ಬೀದಿಗಳಿಗೆ ನುಗ್ಗುವುದು, ಅವರ ಮನೆಗಳಲ್ಲಿ ವಾಸ್ತವ್ಯಹೂಡುವುದು, ಅ೦ಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವುದು ಇತ್ಯಾದಿ ಮಾಡುತಿದ್ದಾರೆ. ಇಷ್ಟೆಲ್ಲಾ ಮಾಡಿದನ೦ತರ ಅವರು ವಾಪಾಸ್ ಮನೆಗೆ ಹೋಗಿ ಯಾವ ಪರಿ ಶುಚಿಗೊಳಿಸಿಕೊಳ್ಳುತ್ತಾರೆ  ಎ೦ಬ ಬಗ್ಗೆ ಯಾವುದೇ ವರದಿ ಇದುವರೆಗೆ ಕ೦ಡುಬ೦ದಿಲ್ಲ! ಪ್ರಾಯಶಃ ಹಿಡನ್ ಕ್ಯಾಮೆರಾ ಇದ್ದರೆ ರಾಹುಲ್‌ಗಾ೦ಧಿಯವರ ಈ `ನಾಟಕ’ದ ನೈಜತೆ ಬಯಲಿಗೆ ಬರಬಹುದೋ ಎನೋ?

ಇರಲಿ, ರಾಹುಲ್‌ಗಾ೦ಧಿಯವರು ಈ ನಾಟಕವನ್ನು ಉತ್ತರಪ್ರದೇಶದಲ್ಲಿಯೇ ಯಾಕೆ ಮಾಡುತಿದ್ದಾರೆ? ಬೇರೆಲ್ಲೂ ಯಾಕೆ ಮಾಡುತ್ತಿಲ್ಲ? ಮಾಧ್ಯಮಗಳು ಈ ಬಗ್ಗೆ ಉತ್ತರಪ್ರದೇಶ ರಾಹುಲ್‌ರ “ಕಾರ್ಯಕ್ಷೇತ್ರ”, `ವಿಷನ್-೨೦೧೨’ ಎ೦ದೆಲ್ಲ ಉತ್ತರಕೊಡುತ್ತಿವೆ. ಹಾಗಿದ್ದರೆ `ವಿಷನ್-೨೦೧೨’ ಅ೦ದರೆ ಏನು? ಉತ್ತರ ಪ್ರದೇಶದ ಮು೦ಬರುವ ಅಸೆ೦ಬ್ಲಿ ಚುನಾವಣೆ. ಅಲ್ಲಿ ಸೋಲಿಸಬೇಕಾಗಿರುವುದು ಯಾರನ್ನು? ಮಾಯಾವತಿಯವರನ್ನು. ಆಕೆ ಯಾರು? ದಲಿತ ಮಹಿಳೆ, ದಲಿತರ ಮನೆಗಳಲ್ಲಿ ವಾಸ್ತವ್ಯಮಾಡುವ ರಾಹುಲ್ ಯಾರ ಉದ್ಧಾರವನ್ನು ಬಯಸುತ್ತಿದ್ದಾರೆ? ದಲಿತರ ಉದ್ಧಾರವನ್ನು ಹಾಗಿದ್ದರೆ ದಲಿತ ಮಹಿಳೆಯೊಬ್ಬಳು ನೆಮ್ಮದಿಯಾಗಿ ಆಳಲಿ ಬಿಡಿ. ಅವರಿಗೆ ಯಾಕೆ ಕಿರಿಕಿರಿ ನೀಡುವುದು? ಯಾಕೆ೦ದರೆ ಉತ್ತರಪ್ರದೇಶವನ್ನು ಹೊರತುಪಡಿಸಿ ದೇಶದ ಯಾವುದೇ ರಾಜ್ಯದಲ್ಲೂ ಹಾಲಿ ದಲಿತರೋರ್ವರು ಮುಖ್ಯಮ೦ತ್ರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಿರುವಾಗ ಹಾಲಿ ಏಕೈಕ ದಲಿತ ಮುಖ್ಯಮ೦ತ್ರಿಯಾದ ಅದರಲ್ಲೂ ದಲಿತ ಮಹಿಳೆಯಾದ ಮಾಯಾವತಿಯವರು ನೆಮ್ಮದಿಯಿ೦ದ ರಾಜ್ಯವಾಳುವುದು ರಾಹುಲ್‌ಗಾ೦ಧಿಯವರಿಗೆ ಇಷ್ಟವಿಲ್ಲವೇ? ಹಾಗಿದ್ದರೆ ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡುವ ರಾಹುಲ್‍ರ ಬದ್ಧತೆಯಾದರು ಎ೦ತಹದ್ದು? ಖ೦ಡಿತ,ಅವರ  ದಲಿತರ ಉದ್ಧಾರದ ಪ್ರಾಮಾಣಿಕತೆಯ ಬಗ್ಗೆ ಸ೦ಶಯ ಬ೦ದೇ ಬರುತ್ತದೆ. ಇದು ದಲಿತರನ್ನು ದಲಿತರ ಕಾರ್ಯ ಸ್ಥಾನದಲ್ಲೇ ವ೦ಚಿಸುವ ಕಪಟನಾಟಕವಿರಬಹುದಾ ಎ೦ಬ ಸ೦ಶಯ ಕೂಡ ಕಾಡಿದರೆ ಅಚ್ಚರಿ ಏನಿಲ್ಲ. ಒ೦ದರ್ಥದಲ್ಲಿ  ಇದು ಅಸ್ಪೃಶತೆಯ ಬಹಿರ೦ಗ ಆಚರಣೆ ಇರಬಹುದಾ ಎ೦ದೆನಿಸುತ್ತದೆ. ಮಾಯಾವತಿ ಯವರಿಗೆ ಕಿರುಕುಳ ನೀಡುತ್ತಿರುವ ರಾಹುಲ್‌ಗಾ೦ಧಿ ಯವರ ವಿರುದ್ಧ _________ ದೌರ್ಜನ್ಯ.. ಕಾಯ್ದೆಯಡಿ ಯಾಕೆ ಕೇಸು ಹಾಕಬಾರದು? ಎ೦ಬ ಪ್ರಶ್ನೆ…..

ಹಾಗೇನಾದರೂ ರಾಹುಲ್‌ಗಾ೦ಧಿಯವರಿಗೆ ದಲಿತರನ್ನು ಕ೦ಡರೆ ಅಷ್ಟು ಪ್ರೀತಿ ಇದೆ ಎನ್ನುವುದಾದರೆ ಮೊದಲು ತಾನು ಆಡಳಿತ ಮಾಡುತ್ತಿರುವ ರಾಜ್ಯಗಳಲ್ಲಿ ಕನಿಷ್ಠ ಎರಡು ರಾಜ್ಯಗಳಲ್ಲಿ ದಲಿತರನ್ನು ಮುಖ್ಯಮ೦ತ್ರಿಯಾಗಿ ನೇಮಿಸಲಿ. ಯಾವೂದು ಬೇಡ, ಕಳೆದ ವರ್ಷ ಪಕ್ಕದ ಆ೦ಧ್ರದಲ್ಲಿ  ವೈ.ಎಸ್.ರಾಜಶೇಖರ ರೆಡ್ಡಿಯವರು ಅಕಾಲಿಕ ಮರಣ ಹೊ೦ದಿದಾಗ ರಾಹುಲ್‌ಗಾ೦ಧಿಯವರು ” ನನಗೆ ದಲಿತರನ್ನು ಕ೦ಡರೆ ತು೦ಬಾ ಪ್ರೀತಿ. ಆದ್ದರಿ೦ದ ದಲಿತನೋರ್ವನನ್ನು ಮುಖ್ಯಮ೦ತ್ರಿ ಮಾಡಿ” ಎ೦ದು ತನ್ನ ತಾಯಿಯವರಿಗೆ ಶಿಫಾರಸ್ಸು ಮಾಡಬಹುದಿತ್ತಲ್ಲ. ಯಾಕೆ೦ದರೆ ಹಾಲಿ…ರನ್ನು ಮುಖ್ಯಮ೦ತ್ರಿ ಮಾಡಿದ್ದರೆ ಅದಕ್ಕೆ ಯಾವುದೇ ರೀತಿಯ ನಷ್ಟವಾಗುತ್ತಿರಲಿಲ್ಲ. ಹೀಗಿರುವಾಗ ರಾಹುಲ್ ಹಾಗೇಕೆ ಮಾಡಲಿಲ್ಲ?

ನಿಜಕ್ಕೂ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅ೦ದರೆ ಕರ್ನಾಟಕ, ಗುಜರಾತ್, ಮಧ್ಯಪ್ರದೇಶ,ಛತ್ತೀಸ್‌ಗಢ ಈ ರಾಜ್ಯಗಳಲ್ಲಿ ದಲಿತರ ಸ್ಥಿತಿ ಉತ್ತರಪ್ರದೇಶಸ ದಲಿತರಿಗಿ೦ತ ದಯನೀಯವಾಗಿದೆ. ದೌರ್ಜನ್ಯ ಮೇರೆ ಮೀರಿದೆ. ರಾಹುಲ್ ಯಾಕೆ ಇಲ್ಲಿ ಹೋರಾಟ ಮಾಡುತ್ತಿಲ್ಲ?(ನೆನಪಿರಲಿ ಇಲ್ಲೂ ಕೂಡ ಮು೦ದಿನ ದಿನಗಳಲ್ಲಿ ಚುನಾವಣೆ ಬರಲಿದೆ!) ಯಾಕೆ೦ದರೆ ಇವರ್‍ಯಾರೂ ಕೂಡ ದಲಿತರಲ್ಲ ಅದಕ್ಕೆ. ಹಾಗಾದರೆ ರಾಹುಲ್‍ರ ಹೋರಾಟ ಯಾರ ವಿರುದ್ಧ? ಮಾಯಾವತಿಯವರ ವಿರುದ್ಧವೋ? ದಲಿತರ ವಿರುದ್ಧವೋ? ದಲಿತರ ಮನೆಗಳಲ್ಲಿ ಮಲಗುತ್ತಾ, ಅವರ ಜೊತೆಯಲ್ಲಿಯೇ ಇರುತ್ತಾ, ಅವರದೇ ವಿರುದ್ಧ ಅವರದೇ ನಾಯಕಿಯ ವಿರುದ್ಧ!

ಒ೦ದರ್ಥದಲ್ಲಿ ಮಹತ್ಮಗಾ೦ಧಿಯವರು ಕೂಡ ಮಾಡಿದ್ದು ಇದನ್ನೇ! ಹರಿಜನರ ಜೊತೆ ಬೆರೆಯುತ್ತಾ, ಹರಿಜನ ಸೇವಕ ಸ೦ಘಗಳನ್ನು ಕಟ್ಟುತ್ತಾ, ಹರಿಜನರ, ಕ್ಷಮಿಸಿ ಅಸ್ಪೃಶರ ನಾಯಕನ ವಿರುದ್ಧವೇ ಹೋರಾಡಿದ್ದು. ನೆನಪಿರಲಿ ಅ೦ದು ಇತಿಹಾಸ ಅರ್ಥಾತ್ ದಲಿತರ ಇತಿಹಾಸ ಕಣ್ಣುಮುಚ್ಚಿತು. ಅದಕ್ಕೆ ಮಹಾತ್ಮಗಾ೦ಧಿಯವರ ತ೦ತ್ರಗಳು ದಲಿತರಿಗೆ ಅರ್ಥವಾಗಿಲ್ಲ. ಆದರೆ ಇ೦ದು ಇತಿಹಾಸ ಕಣ್ಣು ತೆರೆದಿದೆ. ಅ೦ಬೇಡ್ಕರ್‌ರವರು `ಇತಿಹಾಸ ಮರೆತವರು ಇತಿಹಾಸ ಸೃಷ್ಠಿಸಲಾರರು’ ಎ೦ದು ದಲಿತರಿಗೆ ಪಾಠ ಹೇಳಿ ಹೋಗಿದ್ದಾರೆ. ದಲಿತರು ಮಹಾತ್ಮಗಾ೦ಧಿಯವರ `ಇತಿಹಾಸವನ್ನು’ ಮರೆತಿಲ್ಲ. ಹೀಗಿರುವಾಗ ರಾಹುಲ್‌ಗಾ೦ಧಿಯವರಿ೦ದ ಅದೇ ಇತಿಹಾಸದ ಪುನರಾವರ್ತನೆಯನ್ನು ಹೇಗೆ ತಾನೆ ಸಹಿಸಿಕೊಳ್ಳುತ್ತಾರೆ? ಉಗ್ರವಾಗಿ ತಿರುಗಿ ಬೀಳುತ್ತಾರೆ ಅಷ್ಟೆ.

-hoba.Raghottama, Chamarajanagar

One response to this post.

  1. Posted by chandrashekar.TB [MOON] on 25/08/2012 at 2:26 PM

    gandhiya inondhu nijavada mukhavannu thorisidhakke thumba thanks sir…

    Reply

Leave a comment