ಮತಾಂತರಗೊಂಡ ದಲಿತರಿಗೂ ಮೀಸಲಾತಿ; ಕೇಂದ್ರಕ್ಕೆ ನೊಟೀಸ್


ಕ್ರಿಶ್ಚಿಯನ್, ಇಸ್ಲಾಮ್, ಪಾರ್ಸಿ ಮತ್ತು ಜೈನ ಧರ್ಮಗಳಿಗೆ ಮತಾಂತರಗೊಂಡ ದಲಿತರಿಗೂ ಮೀಸಲಾತಿ ನೀಡಬೇಕೆಂಬ ರಂಗನಾಥ ಮಿಶ್ರಾ ಆಯೋಗದ ಶಿಫಾರಸಿನ ಸಂಬಂಧ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದು ದಾಖಲಾಗಿದ್ದು, ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ನೊಟೀಸ್ ಜಾರಿ ಮಾಡಿದೆ.

ಮತಾಂತರಗೊಂಡ ದಲಿತರಿಗೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿರುವ ಅಖಿಲ ಭಾರತ ಕ್ರಿಶ್ಚಿಯನ್ ಫೆಡರೇಷನ್ ಎಂಬ ಸಂಸ್ಥೆಯು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದು, ಸರಕಾರದ ನಡೆಯೇನು ಎಂಬುದನ್ನು ಸುಪ್ರೀಂ ಕೋರ್ಟ್ ಇದೀಗ ಪ್ರಶ್ನಿಸಿದೆ.

ಸುಪ್ರೀಮ್ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ನೇತೃತ್ವದ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗವು ಅಲ್ಪಸಂಖ್ಯಾತರ ಮೀಸಲಾತಿ ಕುರಿತು ನೀಡಿರುವ ವರದಿಯನ್ನು ಲೋಕಸಭೆಯಲ್ಲಿ ಖುರ್ಷೀದ್ ಇತ್ತೀಚೆಗಷ್ಟೇ ಮಂಡಿಸಿದ್ದರು.

ಅದರ ಪ್ರಕಾರ ಸರಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಬೇಕು, ಅಲ್ಲದೆ ಮತಾಂತರಗೊಂಡ ದಲಿತರಿಗೂ ಮೀಸಲಾತಿಯನ್ನು ವಿಸ್ತರಿಸಬೇಕು ಎಂದು ಶಿಫಾರಸು ಮಾಡಲಾಗಿತ್ತು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಬಿಜೆಪಿ, ಶಿವಸೇನೆ ಮತ್ತಿತರ ಪಕ್ಷಗಳು ಹಾಗೂ ವಿಶ್ವ ಹಿಂದೂ ಪರಿಷತ್‌ಗಳು, ಪ್ರಸ್ತಾವಿತ ಮೀಸಲಾತಿ ಜಾರಿಗೊಂಡಲ್ಲಿ ಮತಾಂತರಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದಿದ್ದವು.

ಈ ಸಂಬಂಧ ಪ್ರಕರಣದ ವಿಚಾರಣೆಯನ್ನು ಬುಧವಾರ ಕೈಗೆತ್ತಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮತ್ತು ಬಿ.ಎಸ್. ಚೌಹಾನ್ ಅವರನ್ನೊಳಗೊಂಡ ಪೀಠವು, ರಂಗನಾಥ್ ಮಿಶ್ರಾ ಆಯೋಗದ ವರದಿಯನ್ನು ಜಾರಿಗೊಳಿಸುವ ಸಂಬಂಧ ಪ್ರತಿಕ್ರಿಯಿಸುವಂತೆ ಸಾಮಾಜಿಕ ನ್ಯಾಯ ಮತ್ತು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯಕ್ಕೆ ನೊಟೀಸ್ ಜಾರಿ ಮಾಡಿದೆ.

ಮತಾಂತರ ಪ್ರಕರಣಗಳನ್ನು ಕಡಿಮೆ ಮಾಡುವ ಪ್ರಯತ್ನ ಮಾಡಲಾಗುತ್ತದೆ ಎಂದು ಪ್ರಕಟಿಸಿದ್ದ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಮತ್ತು ಆಯೋಗದ ಶಿಫಾರಸಿನಲ್ಲಿ ವ್ಯತ್ಯಾಸಗಳಿರುವುದರಿಂದ ರಂಗನಾಥ್ ಆಯೋಗದ ವರದಿ ಜಾರಿಯಾಗುವುದು ಕಷ್ಟ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷೀದ್ ಇತ್ತೀಚೆಗೆ ನೀಡಿದ್ದ ಹೇಳಿಕೆಯನ್ನೂ ಹಿರಿಯ ವಕೀಲರುಗಳಾದ ಕೆ.ಕೆ. ವೇಣುಗೋಪಾಲ್ ಮತ್ತು ಡಿ. ವಿದ್ಯಾನಂದಮ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

Leave a comment